ಕೂಡಿಗೆ, ನ. 26: ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮಂಬಳ ಸುಬ್ಬರಾವ್ ಪೈ ಅವರ 111ನೇ ದಿನಾಚರಣೆಯನ್ನು ಕೂಡಿಗೆಯ ಕೆನರಾ ಬ್ಯಾಂಕ್ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಯಾಂಕಿನ ವ್ಯವಸ್ಥಾಪಕ ಪರಶುರಾಮ್, ಮಾತನಾಡಿ, ಸ್ವತಂತ್ರ ಪೂರ್ವದಿಂದಲೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಯೋಜನೆ ಕೈಗೊಳ್ಳುವ ದೃಷ್ಟಿಯಿಂದ ದೇಶದೆಲ್ಲೆಡೆ ಕೆನರಾ ಬ್ಯಾಂಕ್ ಸ್ಥಾಪನೆಗೊಂಡವು. ಪ್ರಾರಂಭಗೊಂಡ ದಿನದಿಂದ ಸಾರ್ವಜನಿಕರ ವ್ಯವಹಾರಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರ ಹಣಕ್ಕೆ ಸಂಬಂಧಿಸಿದಂತೆ ಆರ್ಥಿಕವಾಗಿ ಸಹಕಾರಿಯಾಗುವ ಎಲ್ಲಾ ವ್ಯವಹಾರಗಳನ್ನು ಬ್ಯಾಂಕಿನ ಮೂಲಕ ಹಣವನ್ನು ಕೂಡಿಟ್ಟು ತನ್ನ ವ್ಯವಹಾರ ಜ್ಞಾನವನ್ನು ವೃದ್ಧಿಸಿಕೊಂಡು ಪ್ರಗತಿಯತ್ತ ಸಾಗಲು ಬ್ಯಾಂಕುಗಳು ಸಹಕಾರಿಯಾಗಿದೆ. ಈ ಉದ್ದೇಶದಿಂದ ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮಂಬಳ ಸುಬ್ಬರಾವ್‍ಪೈ ಅವರು ಬ್ಯಾಂಕ್ ಅನ್ನು ಪ್ರಾರಂಭಿಸುವ ಮೂಲಕ ಸಮಾಜಕ್ಕೆ ಕೊಡುಗೆ ರೂಪದಲ್ಲಿ ಸಹಕಾರಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೂಡುಮಂಗಳೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಬ್ಯಾಂಕ್‍ಗಳ ಸ್ಥಾಪನೆಯಿಂದಾಗಿ ಉದ್ಯಮಿಗಳು, ರೈತರು ವಿವಿಧ ಬ್ಯಾಂಕಿನ ಮೂಲಕ ಹಣದ ವ್ಯವಹಾರದ ಮೂಲಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವಾಗಿದೆ ಎಂದರು.

ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯ ಖಾತೆದಾರರು ಹಾಜರಿದ್ದರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ವಿಜಯ ನಾಯಕ್, ಹಿರಿಯ ಸಿಬ್ಬಂದಿ ನಾರಾಯಣ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿಗಳು ಇದ್ದರು.