ಕೂಡಿಗೆ, ಸೆ. 14: ಸರ್ಕಾರಿ ಶಾಲೆಗಳ ಪ್ರಗತಿಯನ್ನು ಸರಕಾರ ಸಾಧಿಸುತ್ತಿದ್ದರೂ ಗ್ರಾಮಾಂತರ ಪ್ರದೇಶಗಳ ಶಾಲೆಗಳು ಇನ್ನೂ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗದ ಸಂದರ್ಭಗಳಲ್ಲಿ ಸ್ಥಳೀಯ ಕೈಗಾರಿಕೋದ್ಯಮಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಎಲ್ಲರೂ ಶಿಕ್ಷಣದ ಒಲವನ್ನು ತೋರುವದರ ಮೂಲಕ ತಮ್ಮ ಪ್ರಗತಿಯನ್ನು ಸಾಧಿಸಿಕೊಳ್ಳಲು ಗ್ರಾಮಾಂತರ ಶಾಲೆಗಳನ್ನು ಕೂಡ್ಲೂರು ಕೈಗಾರಿಕಾ ಸಂಸ್ಥೆಯ ನೆಡ್‍ಕಮಾಂಡೆಡ್ ಕಾಫಿ ಘಟಕದ ವತಿಯಿಂದ ದತ್ತು ತೆಗೆದುಕೊಂಡು ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪ್ರಯತ್ನಿಸುತ್ತಿದೆ ಎಂದು ವ್ಯವಸ್ಥಾಪಕರಾದ ಅನಿಲ್ ಹೇಳಿದರು. ಅವರು ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೂಡಿಗೆ ಜಿ.ಪಂ ಕ್ಷೇತ್ರದ ಸದಸ್ಯೆ ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಹೆಚ್ಚಿಸುವದರ ಜೊತೆಗೆ ಗ್ರಾಮದ ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಖಾಸಗಿ ಸಂಸ್ಥೆಗಳು ಮುಂದೆ ಬಂದಿರುವದು ಶ್ಲಾಘನೀಯ.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಮಾತನಾಡಿ, 2001ರಿಂದ ಪ್ರಾರಂಭವಾದ ರಾಷ್ಟ್ರೀಯ ಶಿಕ್ಷಣ ನೀತಿ ಅನುಗುಣವಾಗಿ ಎಲ್ಲಾ ಪ್ರಾಥಮಿಕ ಮತ್ತು ಮಾದರಿ ಪ್ರಾಥಮಿಕ ಶಾಲೆಯ ಸಮಗ್ರ ಶಿಕ್ಷಣದ ಪ್ರಗತಿ ಬೌದ್ಧಿಕ ಬೆಳವಣಿಗೆಗೆ ಶಾಲೆಯ ಪ್ರಗತಿಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ವಿವಿಧ ಯೋಜನೆಗಳ ಮೂಲಕ ಕಾರ್ಯಗತಗೊಳ್ಳುತ್ತಿವೆ. ಈ ಸಂದರ್ಭ ದತ್ತು ಸ್ವೀಕಾರದ ಒಪ್ಪಂದ ಪತ್ರವನ್ನು ಶಿಕ್ಷಣ ಇಲಾಖೆಯ ವತಿಯಿಂದ ಕಾಫಿ ಸಂಸ್ಥೆಗೆ ಹಸ್ತಾಂತರಿಸಲಾಯಿತು.

ವೇದಿಕೆಯಲ್ಲಿ ನೆಡ್‍ಕಮಾಂಡೆಟ್ ಕಾಫಿ ಘಟಕದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹರೀಶ್, ಸಂಸ್ಥೆಯ ಸಂಪತ್, ಅಣ್ಣಪ್ಪ, ಕ್ಷೇತ್ರ ಶಿಕ್ಷಣ ಕಚೇರಿಯ ಸಂಪನ್ಮೂಲ ವ್ಯಕ್ತಿ ಸುರೇಶ್, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಕೆ.ಜಿ.ಮೋಹಿನಿ, ಕೆ.ಟಿ.ಈರಯ್ಯ, ತಾಲೂಕು ಸಹಕಾರ ಕೂಟದ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ, ಸಿಆರ್‍ಪಿಗಳಾದ ಗಿರೀಶ್, ಸಂತೋಷ್, ಶಿವಲಿಂಗ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಕೂಡಿಗೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸ್ವಾಮಿನಾಯಕ್, ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ, ಶಾಲಾ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಬಿ.ಪ್ರಕಾಶ್, ಉಪಸ್ಥಿತರಿದ್ದರು.

ಈ ಸಂದರ್ಭ ಸ್ಥಳೀಯ ಯಂಗ್ ಸ್ಟಾರ್ ಅಸೋಸಿಯೇಷನ್‍ನ ಅಧ್ಯಕ್ಷರು ಹಾಗೂ ನಿರ್ದೇಶಕರು ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಗಿರೀಶ್ ನೆರವೇರಿಸಿ, ಪಾರ್ವತಿ ಸ್ವಾಗತಿಸಿ, ಶಿಕ್ಷಕಿ ಭಾಗ್ಯ ವಂದಿಸಿದರು.