ಕುಶಾಲನಗರ/ಕೂಡಿಗೆ, ಡಿ. 5: ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಷಷ್ಠಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳು ಭಕ್ತಿಭಾವದೊಂದಿಗೆ ಸುಬ್ರಹ್ಮಣ್ಯ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡುಬಂತು.ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಷಷ್ಠಿ ಪ್ರಯುಕ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಉತ್ತರ ಕೊಡಗಿನ ವಿವಿಧ ಭಾಗಗಳಿಂದ ಸೇರಿದಂತೆ ನೆರೆಯ ಜಿಲ್ಲೆಗಳ ಗಡಿ ಭಾಗದ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡು ತೇರನ್ನು ಎಳೆಯುವ ಮೂಲಕ ಪುನೀತರಾದರು

(ಮೊದಲ ಪುಟದಿಂದ) ಷಷ್ಠಿ ಅಂಗವಾಗಿ ಕೂಡಿಗೆ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿ, ವಿಧಾನಗಳು ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್ ನೇತೃತ್ವದಲ್ಲಿ ತಂಡ ನಡೆಯಿತು. ಉತ್ಸವದ ಅಂಗವಾಗಿ ದೇವರ ಮೂರ್ತಿಯನ್ನು ಅಲಂಕಾರಗೊಳಿಸಿ, ಉಯ್ಯಾಲೆ ಪೂಜೆ ಹಾಗೂ ಅಭಿಷೇಕ ನಡೆಸಲಾಯಿತು. ದೇವಾಲಯದಲ್ಲಿ ಮಹಾ ಮಂಗಳಾರತಿ ನಡೆದ ಬಳಿಕ ಮಧ್ಯಾಹ್ನ ದೇವರ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕುಳ್ಳಿರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವದಲ್ಲಿ ಭಕ್ತರು ದಾರಿಯುದ್ದಕ್ಕೂ ಈಡುಗಾಯಿ ಒಡೆಯುತ್ತಿದ್ದ ದೃಶ್ಯ ಕಂಡುಬಂತು. ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಕೂಡಿಗೆ ದೇವಾಲಯದಿಂದ ಮೆರವಣಿಗೆ ಯಲ್ಲಿ ತೆರಳಿದ ರಥವು ಕೂಡು ಮಂಗಳೂರು ಗ್ರಾಮದಲ್ಲಿ ಸಮಾಪನಗೊಂಡಿತು. ಮೆರವಣಿಗೆ ಯಲ್ಲಿ ಡೊಳ್ಳು ಕುಣಿತ ಎಲ್ಲರ ಗಮನ ಸೆಳೆಯಿತು.

ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ಭಕ್ತಾದಿಗಳು ಈ ಸಂದರ್ಭ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವದ ಬಳಿಕ ಕೂಡಿಗೆಯ ಟಾಟಾ ಕಾಫಿ ಕಂಪೆನಿ ವತಿಯಿಂದ ನೆರೆದಿದ್ದ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕೂಡಿಗೆಯ ಶ್ರೀ ಉದ್ಭವ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ಟಾಟಾ ಕಾಫಿ ಸಂಸ್ಥೆ ಅಧಿಕಾರಿ ಕೆ.ರಿಕಿ ಅಯ್ಯಪ್ಪ, ಎಂ.ಎಂ.ಮಂದಣ್ಣ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಗಳ ಪ್ರಮುಖರು ಪಾಲ್ಗೊಂಡಿದ್ದರು. ಕುಶಾಲನಗರ ಡಿವೈಎಸ್ಪಿ ಸಂಪತ್‍ಕುಮಾರ್ ಮಾರ್ಗ ದರ್ಶನದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಹಾಗೂ ಠಾಣಾಧಿಕಾರಿ ಜೆ.ಇ.ಮಹೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕುಶಾಲನಗರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಉತ್ಸವವನ್ನು ಆಚರಿಸಲಾಯಿತು. ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ, ಹೋಮ ಮತ್ತಿತರ ಧಾರ್ಮಿಕ ವಿಧಿ, ವಿಧಾನಗಳನ್ನು ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಹರಕೆ ಹೊತ್ತ ಭಕ್ತಾದಿಗಳು ಮುಂಜಾನೆಯಿಂದಲೇ ದೇವಾಲಯ ಅಂಗಳದಲ್ಲಿರುವ ಹುತ್ತವನ್ನು ಪೂಜಿಸಿ, ಹಾಲನ್ನು ಎರೆಯುತ್ತಿದ್ದ ದೃಶ್ಯ ಗೋಚರಿಸಿತು. ನಂತರ ದೇವಸ್ಥಾನಕ್ಕೆ ತೆರಳಿ ಹಣ್ಣು-ಕಾಯಿ ಸಮರ್ಪಿಸಿದರು. ಮಹಾ ಮಂಗಳಾರತಿ ನಂತರ ನೆರದಿದ್ದ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಜನತೆ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಶ್ರೀ ಉದ್ಭವ ಸುಬ್ರಹ್ಮಣ್ಯ ದೇವಸ್ಥಾನ ಸೇವಾ ಮತ್ತು ಕಲಾ ಟ್ರಸ್ಟ್‍ನ ಅಧ್ಯಕ್ಷ ಡಿ. ಆರ್. ಚಿಕ್ಕೇಗೌಡ, ಉಪಾಧ್ಯಕ್ಷ ಚಂದ್ರಯ್ಯಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪಿ. ಕಾರ್ತಿಶನ್, ಟಿ.ಜೆ. ರಾಜು, ಎಂ.ಎಸ್.ಮೊಗಣ್ಣೇಗೌಡ, ಎಂ.ಕೆ. ಹನುಮರಾಜ್, ಡಿ. ದೇವರಾಜೇಗೌಡ, ಕೆ. ವಾಮನ ಭಂಡಾರಿ, ಡಿ.ಜೆ. ರೇಣುಕುಮಾರ್, ಹೆಚ್. ಎಮ್. ಮಧುಸೂಧನ್, ಎಚ್.ಕೆ. ಶಿವಾಜಿರಾವ್, ಟಿ.ಡಿ. ಯಶೋದಮ್ಮ, ಪಾರ್ವತಿ, ಎ.ಎನ್. ರಮೇಶ್, ಮೊದಲಾದವರು ಪಾಲ್ಗೊಂಡಿದ್ದರು. ಷಷ್ಠಿ ಅಂಗವಾಗಿ ಸಂಜೆ ವೇಳೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಸ್ವಾಮಿಯ ಉತ್ಸವವನ್ನು ಮೆರವಣಿಗೆಯಲ್ಲಿ ಪಟ್ಟಣದಲ್ಲಿ ವಿವಿಧ ಬಡಾವಣೆಗಳಲ್ಲಿ ಕೊಂಡೊಯ್ಯಲಾಯಿತು.

ಕುಶಾಲನಗರದ ಮಾರುಕಟ್ಟೆ ಆವರಣದ ಶ್ರೀ ನಾಗದೇವತೆ ದೇವಾಲಯದಲ್ಲಿ ಶ್ರೀ ನಾಗದೇವತಾ ಸಮಿತಿ ಆಶ್ರಯದಲ್ಲಿ 9ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಸಮಾರಂಭ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಾಮೂಹಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಅರ್ಚನೆ, ತೀರ್ಥ ಪ್ರಸಾದ ವಿನಿಯೋಗ ನಡೆದು ಸಂಜೆ ದೀಪೋತ್ಸವ ಹಾಗೂ ಮಕ್ಕಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಯಕ್ಷಗಾನ ಕಾರ್ಯಕ್ರಮಗಳು ನಡೆದವು. ಪೂಜಾ ಅಂಗವಾಗಿ ದೇವಾಲಯವನ್ನು ವಿದ್ಯುತ್ ಅಲಂಕಾರ ದೀಪಗಳೊಂದಿಗೆ ಶೃಂಗರಿಸಲಾಗಿತ್ತು.

ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಹೌಸಿಂಗ್ ಬೋರ್ಡ್ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಸಾಮೂಹಿಕ ಫಲಪುಷ್ಪ ಅರ್ಚನೆ ಕಾರ್ಯಕ್ರಮ ಭಾನುವಾರ ನಡೆಯಿತು. ಕುಶಾಲನಗರದ ಶ್ರೀ ಗಣಪತಿ ದೇವಾಲಯ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ಬೈಚನಹಳ್ಳಿ ಮಾರಿಯಮ್ಮ ದೇವಾಲಯ, ಶ್ರೀ ಚೌಡೇಶ್ವರಿ, ಅಂತರಘಟ್ಟೆ ಅಮ್ಮ ದೇವಾಲಯ, ಶ್ರೀ ಬಸವೇಶ್ವರ, ಶ್ರೀ ಕೋಣಮಾರಿಯಮ್ಮ ದೇವಾಲಯ, ಶ್ರೀ ಸೋಮೇಶ್ವರ ದೇವಾಲಯ, ಕಾವೇರಿ ಆರಾಧನಾ ಸಮಿತಿ, ಶ್ರೀ ಮುತ್ತಪ್ಪ ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊರಿನ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ಪುರುಷೋತ್ತಮ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ದೇವಾಲಯದ ಅಧ್ಯಕ್ಷ ಡಿ.ಆರ್. ಚಿಕ್ಕೇಗೌಡ ಮತ್ತು ಕಾರ್ಯಕಾರಿ ಸಮಿತಿ ಪ್ರಮುಖರು ಮತ್ತು ಪಟ್ಟಣ ವ್ಯಾಪ್ತಿಯ ಸರ್ವ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು ಇದ್ದರು.