ಕೂಡಿಗೆ, ಡಿ. 10: ರಾಷ್ಟ್ರೀಯ ಯುವ ಸಹಕಾರ ಸಂಸ್ಥೆಯ (ಎನ್‍ವೈಸಿಎಸ್) ವತಿಯಿಂದ ಕೂಡಿಗೆಯ ಕ್ರೀಡಾಶಾಲೆಯ ಕ್ರೀಡಾಂಗಣದಲ್ಲಿ 2020 ಮತ್ತು 2024 ನೇ ಒಲಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹರಾಗುವ ಅಥ್ಲೇಟಿಕ್ ಕ್ರೀಡಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದವು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಸಿಆರ್‍ಪಿಎಫ್‍ನ ಡೆಪ್ಯೂಟಿ ಕಮಾಂಡೆಂಟ್ ಎ.ಡಿ.ಗಣಪತಿ ಮಾತನಾಡಿ, ಹಿಂಜರಿಕೆ, ಅಸಡ್ಡೆತನ, ಸೋಮಾರಿತನ ತ್ಯಜಿಸಿದಾಗ ಮಾತ್ರ ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಕಠಿಣ ಪರಿಶ್ರಮದ ಮೂಲಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾರ್ಥಿಗಳಾಗಬೇಕಾದವರು ಆ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿ ಕೊಳ್ಳಬೇಕು. ಅಸಾಧ್ಯವನ್ನು ಸಾಧ್ಯವಾಗಿಸುವ ಶಕ್ತಿ ಕ್ರೀಡೆಯಲ್ಲಿದೆ.

ಸರ್ಕಾರ ಎಲ್ಲಾ ಶಾಲೆಗಳಲ್ಲಿ ಕ್ರೀಡೆಗಾಗಿ ಉತ್ತಮವಾದ ಅವಕಾಶ ಗಳನ್ನು ಕಲ್ಪಿಸಿದೆ. ಅಂತಹ ಅವಕಾಶ ಗಳನ್ನು ಸದ್ವಿನಿಯೋಗಿಸಿಕೊಂಡು ಉತ್ತಮ ಆರೋಗ್ಯ, ಶಿಸ್ತು, ಸಮಯಪಾಲನೆ ಕರ್ತವ್ಯ ಪ್ರಜ್ಞೆಯನ್ನಿರಿಸಿಕೊಂಡು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯ ಬಗ್ಗೆಯೂ ಆಸಕ್ತಿಯನ್ನು ಹೊಂದಿ ಬದ್ಧತೆಯಿಂದ ಕ್ರೀಡೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ದೈಹಿಕ ಶಿಕ್ಷಕರು ತಮ್ಮ ಅವಿರತ ಪ್ರಯತ್ನದಿಂದ ಕ್ರೀಡಾ ಪ್ರತಿಭೆಗಳನ್ನು ಸಿದ್ಧಗೊಳಿಸಬೇಕು. ಅದಕ್ಕೆ ಸ್ಪೂರ್ತಿ ಮತ್ತು ಪ್ರೋತ್ಸಾಹ ಕೊಡುವ ರೀತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯ ಬಗ್ಗೆ ಆಸಕ್ತಿ ಮೂಡುವಂತೆ ನೋಡಿಕೊಳ್ಳಬೇಕು. ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ರೀಡಾಶಾಲೆಯ ಪ್ರಾಂಶುಪಾಲೆ ಕುಂತಿಬೋಪಯ್ಯ ಮಾತನಾಡಿ, ಈಗಾಗಲೇ ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆದ 4 ಕ್ರೀಡಾರ್ಥಿಗಳು ಕಳೆದ ಬಾರಿ ನಡೆದ ಒಲಂಪಿಕ್ಸ್‍ನಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಗೌರವ ತಂದಿದ್ದಾರೆ. ಕಳೆದ ಬಾರಿ ದೇಶದಲ್ಲೇ ಕೊಡಗು ಜಿಲ್ಲೆಯಲ್ಲಿ ಒಲಂಪಿಕ್ಸ್ ಅಥ್ಲೇಟಿಕ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ 24 ಜನ ಆಯ್ಕೆಯಾಗಿದ್ದರು. ಅವರಲ್ಲಿ ರಾಷ್ಟ್ರ ಮಟ್ಟಕ್ಕೆ 9 ಕ್ರೀಡಾಪಟುಗಳು ಅಥ್ಲೇಟಿಕ್ಸ್‍ನಲ್ಲಿ ಭಾಗವಹಿಸಿದ್ದರು. ಇವರೆಲ್ಲರಿಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಪಡೆಯಲು ಉತ್ತಮ ತರಬೇತಿ ನೀಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಗುಲ್ಬರ್ಗ, ಬೆಳಗಾಂ, ಮಂಗಳೂರು, ಬೆಂಗಳೂರು, ಮೈಸೂರು -ಕೊಡಗು ಭಾಗಗಳಲ್ಲಿ ಸುಮಾರು 300 ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 11-14, 15-17 ವಯೋಮಿತಿಯ ಬಾಲಕ ಬಾಲಕಿಯರಿಗೆ 100 ಮೀ, 200 ಮೀ, 400 ಮೀ ಓಟದ ಮೂಲಕ ಸ್ಪರ್ಧೆಗಳನ್ನೇರ್ಪಡಿಸಿ ನಿಗದಿತ ಅರ್ಹತಾ ಸಮಯದೊಳಗೆ ಓಡಿ ಆಯ್ಕೆಯಾದ ಕ್ರೀಡಾಪಟುಗಳಿಗೆ ತರಬೇತಿ ನೀಡುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಥ್ಲೇಟಿಕ್ ತರಬೇತಿದಾರ ಆಂಥೋನಿ ಡಿಸೋಜ, ಎನ್‍ವೈಸಿಎಸ್‍ನ ದಕ್ಷಿಣ ಭಾರತದ ಪ್ರತಿನಿಧಿ ಮಂಗೇಶ್ ಬೆಂಡೆಕಾಳೆ, ರಾಜ್ಯ ಎನ್‍ವೈಸಿಎಸ್‍ನ ಪ್ರತಿನಿಧಿ ರಮೇಶ್, ಜಿಲ್ಲಾ ಪ್ರತಿನಿಧಿ ಧನಂಜಯ, ಸಹಾಯಕ ಜಿಲ್ಲಾ ಪ್ರತಿನಿಧಿಗಳಾದ ನವನೀತ್ ಪೊನ್ನಟ್ಟಿ, ಪವನ್ ವಶಿಷ್ಟ, ರಾಕೇಶ್ ಮತ್ತು ಲೋಕೇಶ್ ಇದ್ದರು.

ಮೈಸೂರು- ಕೊಡಗು ಜಿಲ್ಲೆಗಳ ಶಾಲೆಗಳಿಂದ ಆಯ್ಕೆ ಮಾಡಿ ಕಳುಹಿಸಲಾದ ಸುಮಾರು 350ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಸಂಜಯ್ ಬಾಣದ್, ಸುರೇಶ್, ಬಿಂದ್ಯ, ಸದಾಶಿವಯ್ಯ ಎಸ್.ಪಲ್ಲೇದ್, ಆಂಥೋನಿ ಡಿಸೋಜ ಕಾರ್ಯನಿರ್ವಹಿಸಿದರು.