ಕೂಡಿಗೆ, ಅ. 5: ಸಂಘವು ಎರಡು ಸುಸಜ್ಜಿತ ಸಭಾಂಗಣಗಳ ವ್ಯವಹಾರವನ್ನು ಹೊಂದಿದ್ದು, 2014-15ನೇ ಸಾಲಿನಲ್ಲಿ ರೂ. 9.77 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 57.80 ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಅದರನ್ವಯ ರೂ. 24.29 ಲಕ್ಷ ನಿವ್ವಳ ಲಾಭವಾಗಿರುವ ಕಾರಣ ಲೆಕ್ಕ ಪರಿಶೋಧನೆಯ ಮೂಲಕ ಸಂಘ ಎ ತರಗತಿಗೆ ಮೇಲ್ದರ್ಜೆ ಹೊಂದಿದೆ. ಕೇವಲ ಲಾಭ ನಿರೀಕ್ಷೆಯನ್ನು ಮಾತ್ರ ಬೆನ್ನತ್ತದೆ, ಸಂಘದ ಸದಸ್ಯರಿಗೆ ಸೇವೆಯನ್ನು ಒದಗಿಸುವದು ಮುಖ್ಯ ಉದ್ದೇಶವಾಗಿದೆ ಎಂದು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ಹೇಳಿದರು.

ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆದ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2015-16ನೇ ಸಾಲಿನ 65ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು ಸದಸ್ಯರಿಗೆ ಡಿವಿಡೆಂಡ್ ರೂಪದಲ್ಲಿ ಉತ್ತಮವಾದ ಲಾಭವನ್ನು ನೀಡುತ್ತಿದ್ದು, 73 ವರ್ಷಗಳ ಸಾರ್ಥಕ ಸೇವೆಯನ್ನು ತನ್ನ ಸದಸ್ಯರಿಗೆ ಹಾಗೂ ಸದಸ್ಯೇತರರಿಗೆ ನೀಡುತ್ತಾ, ಉತ್ತಮ ಪ್ರಗತಿಯಲ್ಲಿ ಸಾಗುತ್ತಿದೆ. ಸೋಮವಾರಪೇಟೆ ತಾಲೂಕಿಗೆ ಪಡಿತರ ವಿತರಣೆಯ ಸಗಟು ನಾಮಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 100 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದರು.

ರಸಗೊಬ್ಬರ ಬೆಲೆಯ ಬಗ್ಗೆ ಮಾತನಾಡಿದ ಸದಸ್ಯರಾದ ಗಣಿ ಪ್ರಸಾದ್, ಎಸ್.ಪಿ. ರಾಜು, ಶಿವಾನಂದ ಅವರು ಹಲವು ಮಾಹಿತಿ ನೀಡಿದರು. ವಸತಿ ಗೃಹಗಳನ್ನು ನೂತನವಾಗಿ ನಿರ್ಮಿಸುವ ವಿಚಾರ ಚರ್ಚೆ ನಡೆಯುತ್ತಿದ್ದ ಸಂದರ್ಭ ಸದಸ್ಯ ರತೀಶ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ರೂ. 1 ಕೋಟಿವರೆಗೆ ಸಾಲ ಸೌಲಭ್ಯ ಸಿಗಲಿದೆ. ಅದರಲ್ಲಿ ಶೇ. 40 ರಷ್ಟು ಸಬ್ಸಿಡಿ ಇದ್ದು, ಅದನ್ನು ಬಳಸಿಕೊಂಡು ಹೋಂ ಸ್ಟೇ ಹಾಗೂ ಕಾಟೇಜ್‍ಗಳನ್ನು ಸಂಘದ ವತಿಯಿಂದ ನಿರ್ಮಾಣ ಮಾಡಿದಲ್ಲಿ ಸಂಘಕ್ಕೆ ಉತ್ತಮ ಲಾಭ ಬರಲಿದೆ ಎಂದು ಹೇಳಿದರು.

ನಿರ್ದೇಶಕ ಆರ್.ಕೆ. ಚಂದ್ರು ಸಭೆ ನಡೆಯುವಾಗ ವೇದಿಕೆಯಿಂದ ನಿರ್ಗಮಿಸಿ ಅಧ್ಯಕ್ಷರ ಮತ್ತು ಸಭೆಯ ಒಪ್ಪಿಗೆ ಪಡೆಯದೇ ಹೋಗಿದ್ದಾರೆ ಎಂದು ಸದಸ್ಯರಾದ ಶಶಿ ಭೀಮಯ್ಯ, ರಾಘವಯ್ಯ, ಕೆ.ಕೆ. ನಾಗರಾಜಶೆಟ್ಟಿ ಆಕ್ಷೇಪಿಸಿದರು.

ನಿರ್ದೇಶಕರ ಮತ್ತು ಅಧ್ಯಕ್ಷರ ಪ್ರಯಾಣ ಭತ್ಯೆ ವಿಚಾರದ ಬಗ್ಗೆ ಸದಸ್ಯ ವಿ.ಎಸ್. ಆನಂದ್ ಕುಮಾರ್ ಪ್ರಸ್ತಾಪಿಸಿದಾಗ ಹಳೆಯ ಲೆಕ್ಕದಲ್ಲೇ ಎಲ್ಲವೂ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಸಂಘದ ನೌಕರರಾಗಿ ಅಕಾಲಿಕ ನಿಧನವನ್ನಪ್ಪಿದ ಲಲಿತಾ ಪರಮೇಶ್, ಅವರ ಬಗ್ಗೆ ಪತಿ ಪರಮೇಶ್ ಸಭೆಗೆ ಮನವಿ ಮಾಡಿಕೊಂಡು ಮಾನವೀಯ ದೃಷ್ಟಿಯಿಂದ ತನ್ನ ಮಗನಿಗೆ ನೌಕರಿ ನೀಡಬೇಕೆಂದು ಕೇಳಿದರು. ಅದಕ್ಕೆ ಸಭೆಯೂ ದನಿ ಗೂಡಿಸಿತು.

ಸಭಾ ಭವನದಲ್ಲಿ ಶಾಮಿಯಾನ ಮತ್ತು ಅಲಂಕಾರ ವ್ಯವಸ್ಥೆ ಮಾಡುವವರಿಂದ ರೂ. 1000 ಪಡೆಯುತ್ತಿರುವ ಸಂಘದ ಕಾರ್ಯವೈಖರಿಯನ್ನು ಸದಸ್ಯರಾದ ಗಣಿ ಪ್ರಸಾದ್ ಪ್ರಶ್ನಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಕೆ. ರಘು, ನಿರ್ದೇಶಕರಾದ ಪ್ರಸನ್ನ, ಬಿ.ಎಂ. ಸೋಮಯ್ಯ, ಟಿ.ಬಿ. ಜಗದೀಶ್, ಆರ್.ಕೆ. ಚಂದ್ರು, ಬಿ.ಎಸ್. ಚಂದ್ರಶೇಖರ್, ಕೃಷ್ಣರಾಜು, ಕುಮಾರಪ್ಪ, ಸರೋಜ ಹಾಗೂ ಕಾರ್ಯದರ್ಶಿ ಪಾರ್ವತಿ ಇದ್ದರು.