ಕುಶಾಲನಗರ, ಡಿ.16: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೋತ್ಸವ ಕಾರ್ಯಕ್ರಮ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಪೂಜೋತ್ಸವದ ಅಂಗವಾಗಿ 14 ರಿಂದ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿಗಳು ನೆರವೇರಿದವು

ಶುಕ್ರವಾರ ಬೆಳಗ್ಗೆಯಿಂದ ದೇವರಿಗೆ ಶಾಸ್ತಾಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ ನಡೆಯಿತು. ಪರಮೇಶ್ವರ ಹೊಳ್ಳ, ರವಿಚಂದ್ರ ಆಚಾರ್, ಹರಿಭಟ್ ನೇತೃತ್ವದಲ್ಲಿ ಅರ್ಚಕರ ತಂಡದಿಂದ ಪೂಜಾ ವಿಧಿಗಳು ನೆರವೇರಿದವು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಸ್ಥಾನ ಕಾರ್ಯಕ್ರಮಗಳ ಸೇವಾರ್ಥದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಾಲ್ ಕೊಂಬು ಮೆರವಣಿಗೆ ಬಳಿಕ ಸಂಜೆ 6 ಗಂಟೆಗೆ ಚಂಡೆ ವಾದ್ಯ ವೃಂದ, ಸಾಲಂಕೃತ ಆನೆ, ಅಲಂಕೃತ ಮಂಟಪದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿ ಮೂರ್ತಿಯ ಮೆರವಣಿಗೆ ನಡೆಯಿತು.

ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಶಿವಾನಂದನ್, ಗೌರವ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಟ್ರಸ್ಟಿಗಳಾದ ವಿ.ಆರ್.ಶಿವಶಂಕರ್, ಡಿ.ಆರ್.ಸೋಮಶೇಖರ್, ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮತ್ತಿತರರು ಇದ್ದರು.