ಕುಶಾಲನಗರ, ಜು. 30: ಸಂಘ-ಸಂಸ್ಥೆಗಳ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಲ್ಲಿ ಸಾಧನೆಗೆ ಪ್ರೋತ್ಸಾಹ ಕಲ್ಪಿಸಿದಂತಾಗುತ್ತದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್‍ನ ಆಶ್ರಯದಲ್ಲಿ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಗಳು ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕರು ತಿಳಿಸಿದರು. ಟ್ರಸ್ಟ್‍ನ ಅಧ್ಯಕ್ಷ ಹೆಚ್.ಎಂ. ರಘು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹೆಚ್.ಎಂ.ವೆಂಕಟೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್‍ನ ಪ್ರಾಂಶುಪಾಲೆ ವಿದೂಷಿ ರೂಪ ಶ್ರೀಕೃಷ್ಣ ಉಪಾಧ್ಯ, ಪತ್ರಕರ್ತ ಬಿ.ಎ.ಭಾಸ್ಕರ್, ಸಮುದಾಯ ಆರೋಗ್ಯ ಕೇಂದ್ರ ಹೆಚ್.ವೀರಭದ್ರ, ಆಟೋ ಚಾಲಕ ಆರ್.ಮೋಹನ್, ಪಟ್ಟಣ ಪಂಚಾಯಿತಿ ನೌಕರ ಸಿ. ರಂಗಸ್ವಾಮಿ, ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್ ಸಂಸ್ಥಾಪಕ ಆರ್.ಎಸ್. ಕಾಶೀಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಪ್ರಕಾಶ್ ಅವರು ಮಾತನಾಡಿದರು.

ವಿಶೇಷ ಆಹ್ವಾನಿತರಾಗಿ ಪೊಲೀಸ್ ಉಪ ಅಧೀಕ್ಷಕ ಟಿ.ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಠಾಣಾಧಿಕಾರಿ ಜೆ.ಇ. ಮಹೇಶ್ ಉಪಸ್ಥಿತರಿದ್ದು ಮಾತನಾಡಿದರು.

ಟ್ರಸ್ಟ್‍ನ ಗೌರವಾಧ್ಯಕ್ಷ ಟಿ.ಆರ್. ಪ್ರಭುದೇವ್, ಪ್ರಬಾರ ಪ್ರಧಾನ ಕಾರ್ಯದರ್ಶಿ ಟಿ.ಎಲ್. ತ್ಯಾಗರಾಜ್, ಭರಮಣ್ಣ ಟಿ. ಬೆಟಗೇರಿ ಮತ್ತು ಸದಸ್ಯರು ಇದ್ದರು.