ಕುಶಾಲನಗರ, ಸೆ. 7: ಸರಕಾರಿ ಜಾಗದಲ್ಲಿ ಜೆಸಿಬಿಯೊಂದು ಅಕ್ರಮವಾಗಿ ಕಾಮಗಾರಿ ನಡೆಸಿದ ಹಿನ್ನೆಲೆ ಕುಡಿಯುವ ನೀರಿನ ಟ್ಯಾಂಕ್ ಒಡೆದು ಲಕ್ಷಾಂತರ ಲೀಟರ್ ಕುಡಿವ ನೀರು ಪೋಲಾಗುವದರೊಂದಿಗೆ ಕೆಳಭಾಗದಲ್ಲಿದ್ದ ಗ್ಯಾರೇಜ್ ಒಂದಕ್ಕೆ ನೀರು ನುಗ್ಗಿ ಬಂಡೆ ಕುಸಿದು ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಮಣ್ಣು ಪಾಲಾಗಿರುವ ಘಟನೆ ಕುಶಾಲನಗರದಲ್ಲಿ ತಡರಾತ್ರಿಯಲ್ಲಿ ನಡೆದಿದೆ.
ಕುಶಾಲನಗರ-ಮೈಸೂರು ರಸ್ತೆಯ ಪಂಚಾಯಿತಿ ವಸತಿ ಗೃಹಗಳ ಸಮುಚ್ಛಯದ ಸಮೀಪ ವಾಟರ್ ಟ್ಯಾಂಕ್ ಬಳಿ ಈ ಘಟನೆ ಸಂಭವಿಸಿದ್ದು, ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನ ಟ್ಯಾಂಕ್ ಬಳಿಯಿರುವ ಸರಕಾರಿ ಜಾಗದಲ್ಲಿ ಜೆಸಿಬಿ ಸಮತಟ್ಟು ಮಾಡುವ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ನಷ್ಟಕ್ಕೊಳಗಾದ ಗ್ಯಾರೇಜ್ ಮಾಲೀಕ ಗಣೇಶ್ ತಿಳಿಸಿದ್ದಾರೆ.
ಕಾಮಗಾರಿ ಸಂದರ್ಭ ಬೃಹತ್ ಟ್ಯಾಂಕ್ನ ಪೈಪ್ ಒಡೆದುಹೋಗಿದ್ದು ರಾತ್ರಿ ನೀರು ಸಂಪೂರ್ಣ ಹರಿದು ಹೋಗಿ ಕೆಳಭಾಗದಲ್ಲಿರುವ ಗ್ಯಾರೆಜ್ಗೆ ನುಗ್ಗಿದೆ. ಈ ಸಂದರ್ಭ ಎತ್ತರದಲ್ಲಿದ್ದ ಬಂಡೆಗಳು ಕುಸಿದು ಕೆಳಗೆ ನಿಲ್ಲಿಸಲಾಗಿದ್ದ ಕಾರುಗಳು, ಜನರೇಟರ್ ಜಖಂಗೊಂಡಿವೆ. ನಿರ್ಮಿಸಲಾಗಿದ್ದ ಬಾವಿ ಕೂಡ ಸಂಪೂರ್ಣ ಮಣ್ಣು ತುಂಬಿದ್ದು ಮೋಟಾರ್ಗಳು ಹಾನಿಗೊಳಗಾಗಿವೆ ಎಂದು ಗಣೇಶ್ ತಿಳಿಸಿದ್ದಾರೆ. ತಮಗೆ ಉಂಟಾಗಿರುವ ನಷ್ಟವನ್ನು ಭರಿಸಿಕೊಡುವಂತೆ ಗಣೇಶ್ ಆಗ್ರಹಿಸಿದ್ದಾರೆ. ಪಂಚಾಯಿತಿ ಗಮನಕ್ಕೆ ತರದೆ ಈ ಕಾಮಗಾರಿ ನಡೆಸಿದ್ದು ಯಾವದೇ ಮುನ್ನೆಚ್ಚರಿಕೆ ವಹಿಸದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.
ಹಬ್ಬದ ಹಿನ್ನೆಲೆ ಕುಡಿಯುವ ನೀರಿನ ಅಭಾವ ಉಂಟಾಗಲು ಈ ಘಟನೆ ಕಾರಣವಾಯಿತು ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಬೆಟ್ಟ ಕೊರೆದು ಸರಕಾರಿ ಜಾಗ ಒತ್ತುವರಿಯಾಗುವದರೊಂದಿಗೆ ಬೃಹತ್ ನೀರಿನ ಟ್ಯಾಂಕ್ ಕುಸಿದು ಬೀಳುವ ಸಾಧ್ಯತೆ ಕೂಡ ಉಂಟಾಗಿರುವದಾಗಿ ಸ್ಥಳೀಯರು ದೂರಿದ್ದು, ತಕ್ಷಣ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.