ಕುಶಾಲನಗರ, ಆ. 3: ಮುಂಬರುವ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕುಶಾಲನಗರ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ನಿರ್ಧಾರ ಕೈಗೊಂಡಿದೆ. ಕುಶಾಲನಗರದ ಪಟ್ಟಣ ಪಂಚಾಯ್ತಿ ಕಚೆÉೀರಿಯ ಸಭಾಂಗಣದಲ್ಲಿ ನಡೆದ ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಪ್ರಮುಖರ ಸಹಯೋಗದೊಂದಿಗೆ 70ನೇ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಿಗ್ಗೆ 9.30 ಕ್ಕೆ ಧ್ವಜಾರೋಹಣ ನೆರವೇರಿಸುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದು ಪ್ರಮುಖರು ತಿಳಿಸಿದ್ದಾರೆ.
ಕಳೆದ 16 ವರ್ಷಗಳಿಂದ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿದ್ದ ಸಮಾರಂಭವನ್ನು ಕಳೆದ 1 ವರ್ಷದಿಂದ ಈಚೆಗೆ ಕುಶಾಲನಗರ ಪಟ್ಟಣ ಪಂಚಾಯ್ತಿ ಉಸ್ತುವಾರಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಪೂರ್ವ ತಯಾರಿ ಸಭೆ ವಿಳಂಭದ ಹಿನೆÀ್ನಲೆಯಲ್ಲಿ ಸ್ಥಳೀಯ ಸಂಘಸಂಸ್ಥೆಗಳಲ್ಲಿ ಈ ಬಗ್ಗೆ ಗೊಂದಲ ಉಂಟಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಬೆನ್ನಲ್ಲೇ ದಿಢೀರನೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಸಂಘಸಂಸ್ಥೆಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿತು.
ರಾಷ್ಟ್ರೀಯ ಹಬ್ಬ ಆಚರಣೆಯ ಬಗ್ಗೆ ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಪಂಚಾಯ್ತಿ ಅಧ್ಯಕ್ಷ ಚರಣ್ ಅವರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವೇಳೆ ಸಭೆಯಲ್ಲಿದ್ದ ಪತ್ರಿಕಾ ಪ್ರತಿನಿಧಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರಿಂದ ಭಾರೀ ಆಕ್ರೋಶವನ್ನು ಅಧ್ಯಕ್ಷರು ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಈ ಸಂದರ್ಭ ಮಧ್ಯಪ್ರವೇಶಿಸಿದ ಡಿವೈಎಸ್ಪಿ ಕುಮಾರ್ ಅವರು ಸಭಿಕರನ್ನು ಸಮಾಧಾನಿಸುವದರೊಂದಿಗೆ ಸಭೆಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಪಟ್ಟಣ ಪಂಚಾಯ್ತಿ ಉಸ್ತುವಾರಿಯಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಪ್ರಮುಖರನ್ನು ಒಳಗೊಂಡು ಮುಂಬರುವ ಸ್ವಾತಂತ್ರ್ಯೋತ್ಸವ ಆಚರಣೆಗೆ ಪೂರ್ವ ಸಿದ್ಧತೆಗಾಗಿ ಕೇಂದ್ರ ಸಮಿತಿ ಹಾಗೂ ಉಪಸಮಿತಿಗಳನ್ನು ರಚಿಸಲಾಯಿತು.
ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಚರಣ್, ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷ ಡಿವೈಎಸ್ಪಿ ಟಿ.ಕುಮಾರ್, ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರಘು, ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಪಂಚಾಯ್ತಿ ಸದಸ್ಯರಾದ ಹೆಚ್.ಜೆ. ಕರಿಯಪ್ಪ, ಹೆಚ್.ಡಿ. ಚಂದ್ರು, ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್, ವೆಂಕಟೇಶ್ ಪೂಜಾರಿ, ಎಂ.ಕೃಷ್ಣ, ಸಂಘಸಂಸ್ಥೆಗಳ ಪ್ರಮುಖರಾದ ಕೆ.ಜಿ.ಮನು, ಹೆಚ್.ಎನ್. ರಾಮಚಂದ್ರ, ನಿಡ್ಯಮಲೆ ದಿನೇಶ್, ಎಂ.ಡಿ. ಕೃಷ್ಣಪ್ಪ, ಹೆಚ್.ಡಿ. ಶಿವಾಜಿರಾವ್, ಲಕ್ಷ್ಮಿನಾರಾಯಣ, ಮಂಜುನಾಥ್, ಪ್ರಮುಖರಾದ ಉತ್ತಪ್ಪ, ಚನ್ನಕೇಶವ, ವಿ.ಎಸ್. ಆನಂದಕುಮಾರ್, ಕೆ.ಬಿ.ರಾಜು, ಶಾಲಾ ಕಾಲೇಜು, ಮಾಜಿ ಸೈನಿಕ ಸಂಘದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಇದ್ದರು.