ಕುಶಾಲನಗರ, ಡಿ. 23: ಹಾರಂಗಿಯ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯ 15ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ `ಜ್ಞಾನಗಂಗಾ ಕಪ್' ಅಂತರ್ ಜಿಲ್ಲಾಮಟ್ಟದ ಕ್ರೀಡಾಕೂಟ ಶಾಲೆಯ ಮೈದಾನದಲ್ಲಿ ನಡೆಯಿತು. ಎರಡು ದಿನಗಳ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕರಿಗೆ ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್ ಹಾಗೂ ಬಾಲಕಿಯರಿಗೆ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆದವು. ಕೊಡಗು ಸೇರಿದಂತೆ ನೆರೆಯ ಮೈಸೂರು, ಮಂಗಳೂರು, ಹಾಸನ ಜಿಲ್ಲೆಗಳಿಂದ ಒಟ್ಟು 35 ಕ್ಕೂ ಅಧಿಕ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಪಂದ್ಯಾವಳಿಯ ತೀರ್ಪುಗಾರರಾಗಿ ರಮಾನಂದ್, ಮಂಜುನಾಥ್, ಕೃಷ್ಣ, ಪ್ರವೀಣ್, ಕಾಳಪ್ಪ, ಪಾಲಾಕ್ಷ ಕಾರ್ಯನಿರ್ವಹಿಸಿದರು. ಶಾಲೆಯ ಧರ್ಮದರ್ಶಿ ಹಾಗೂ ಕ್ರೀಡಾಕೂಟದ ಸಂಯೋಜಕ ಪುಲಿಯಂಡ ರಾಮ್ ದೇವಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಲೆಯ ಅಧ್ಯಕ್ಷ ಅನಂತ ಪದ್ಮನಾಭ, ಖಜಾಂಚಿ ಸುಧೀರ್, ಶೋಭಾ ಅನಂತಪದ್ಮನಾಭ, ಶಾಲಾ ಪ್ರಾಂಶುಪಾಲ ಟಿ.ಎಂ. ಶರೀನ್, ಉಪ ಪ್ರಾಂಶುಪಾಲರಾದ ಬಿ.ಕೆ. ನಾಗರಾಜ್, ದೈಹಿಕ ಶಿಕ್ಷಕರಾದ ಸತೀಶ್, ಯೋಗೇಶ್, ದೇವಾನಂದ್, ಹಿತೇಶ್ ಇದ್ದರು. ವಾಲಿಬಾಲ್ ಪಂದ್ಯಾಟದಲ್ಲಿ ನಾಪೋಕ್ಲು ಸೇಕ್ರೆಡ್ ಹಾರ್ಟ್, ಹುಣಸೂರಿನ ಟ್ಯಾಲೆಂಟ್, ಸೂರತ್ಕಲ್‍ನ ವಿದ್ಯಾದಾಹಿನಿ, ಬೆಟ್ಟದಪುರದ ಡಿಟಿಎಂಎನ್ ಶಾಲಾ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಫಾತಿಮಾ, ವೀರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅತ್ತೂರಿನ ಜ್ಞಾನಗಂಗಾ ಶಾಲೆಗಳ ತಂಡ ಸೆಮಿಫೈನಲ್ ಪ್ರವೇಶಿಸಿವೆ.

ವಿದ್ಯಾರ್ಥಿಗಳ ವಿಜ್ಞಾನ ಮಾದರಿ ತಯಾರಿಕೆ ಹಾಗೂ ಪ್ರದರ್ಶನ ಸ್ಪರ್ಧೆ ಶಾಲಾ ಆವರಣದಲ್ಲಿ ನಡೆಯಿತು.