*ವೀರಾಜಪೇಟೆ, ಡಿ. 18: ಜಿಲ್ಲೆಯ ಯೋಧನೋರ್ವ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಮೃತದೇಹ ನಾಡಿದ್ದು, ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.ವೀರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ನಿವಾಸಿ, ಶಶಿ ಹಾಗೂ ವತ್ಸಲ ದಂಪತಿಗಳ ಪುತ್ರ ಕೆ.ಎಸ್. ರಾಜೇಶ್ (29) ಎಂಬವರೇ ದುರ್ಮರಣಕ್ಕೀಡಾದ ಯೋಧರಾಗಿದ್ದಾರೆ. 2007ರಲ್ಲಿ ಎಂಇಜಿಗೆ ಸೇರ್ಪಡೆÉಗೊಂಡು, ಇದೀಗ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ 50 ಮಂದಿ ಯೋಧರೊಂದಿಗೆ ರಾಜೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಜೇಶ್ ವಿವಾಹಿತನಾಗಿದ್ದು, ಪತ್ನಿ ಶಿಲ್ಪ ಹಾಗೂ 1 ವರ್ಷ 8 ತಿಂಗಳ ಪುತ್ರಿ ಇಂಚರಾಳನ್ನು ಅಗಲಿದ್ದಾರೆ. ಶನಿವಾರ ರಾತ್ರಿ ಬೇತ್ರಿಯ ನಿವಾಸದಲ್ಲಿರುವ ಪತ್ನಿಯೊಂದಿಗೆ ಕರ್ನಾಟಕ ಸಿಮ್ನಲ್ಲಿ ಸುಮಾರು 18 ನಿಮಿಷಗಳ ಕಾಲ ಮಾತನಾಡಿದ್ದು, ಬಳಿಕ ಆ ಮೊಬೈಲನ್ನು ತಾನು ಮಲಗುವ ಹಾಸಿಗೆಯ ಮೇಲಿಟ್ಟು, ಹಿಮಾಚಲ ಪ್ರದೇಶದ ಸಿಮ್ ಕಾರ್ಡ್ ಹೊಂದಿರುವ ಮತ್ತೊಂದು ಮೊಬೈಲನ್ನು ತೆಗೆದುಕೊಂಡು ಟಾರ್ಚ್ ಬೆಳಕಿನೊಂದಿಗೆ ಮೂತ್ರ ವಿಸರ್ಜನೆಗೆಂದು ಕೊಠಡಿಯಿಂದ ಹೊರ ತೆರಳಿದ್ದರು. ಈ ಸಂದರ್ಭ ಅವರ ಕೊಠಡಿಯಲ್ಲಿ ಕೇರಳ ಮೂಲದ ಯೋಧ ರಫೀಕ್ ಮಲಗಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ರಾಜೇಶ್ ಅವರ ಮೊಬೈಲ್ ಸುಮಾರು ಸಮಯಗಳ ಕಾಲ ರಿಂಗಾದಾಗ ಉಳಿದ ಯೋಧರ ಗಮನಕ್ಕೆ ಬಂದು ರಾಜೇಶ್ ಕಾಣದಿದ್ದಾಗ ಸುತ್ತಲೂ ಹುಡುಕಾಡಿದ್ದಾರೆ. ಈ ಸಂದರ್ಭ ಅವರ ಮತ್ತೊಂದು ಮೊಬೈಲ್ಗೆ ಕರೆ ಮಾಡಿದ್ದು,
(ಮೊದಲ ಪುಟದಿಂದ) ಆ ಮೊಬೈಲ್ ಸುಮಾರು 20 ಮೀಟರ್ ದೂರದಲ್ಲಿ ತಂತಿ ಬೇಲಿ ಸಮೀಪ ರಿಂಗ್ ಆಗುತ್ತಿರುವದು ಗಮನಕ್ಕೆ ಬಂದಿತು. ಅಲ್ಲಿ ಯೋಧನ ಚಪ್ಪಲಿ ಹಾಗೂ ಟಾರ್ಚ್ ಕೂಡ ಕಂಡು ಬಂದು, ಯೋಧರು ಸುತ್ತಮುತ್ತಲೂ ಹುಡುಕಾಡಿದ್ದಾರೆ. ಈ ಸಂದರ್ಭ ಯೋಧನ ದೇಹ ಸುಮಾರು 400- 500 ಮೀಟರ್ ಬೆಟ್ಟದ ಆಳದಲ್ಲಿ ಬಿದ್ದಿರುವದು ಕಂಡು ಬಂದಿದೆ. ಯೋಧ ಸ್ಥಳದಲ್ಲಿಯೇ ಮೃತರಾಗಿದ್ದು, ತಲೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯವುಂಟಾಗಿತ್ತು. ರಾತ್ರಿ ಮೂತ್ರ ವಿಸರ್ಜನೆಗೆ ತೆರಳಿರಬಹುದೆಂದು ರಫೀಕ್ ಸೇರಿದಂತೆ ಉಳಿದ ಯೋಧರ ಊಹೆಯಾಗಿದ್ದು, ಈ ಸಂದರ್ಭ ತಲೆಸುತ್ತು ಬಂದು ಬೆಟ್ಟದ ಆಳದಲ್ಲಿ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತರಾಗಿರಬೇಕೆಂಬದು ಅವರ ಅಭಿಪ್ರಾಯ. ಬೆಟಾಲಿಯನ್ ಚೀಫ್ ಲಲಿತ್ ಅವರು ಚೆನ್ನೈನಲ್ಲಿರುವ ಮೃತ ರಾಜೇಶ ಅವರ ಮಾವನವರಿಗೆ ಮಾಹಿತಿ ನೀಡಿದ್ದು, ಬಳಿಕ ಸಹಾಯಕ ಚೀಫ್ ರಾಮಚಂದ್ರ ಅವರು ಬೇತ್ರಿಯಲ್ಲಿರುವ ಮೃತ ಯೋಧನ ಪತ್ನಿ ಸೇರಿದಂತೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಮೃತ ಯೋಧನ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಲುಮನಾಲಿ ಪ್ರದೇಶದಲ್ಲಿ -170 ಸೆಲ್ಸಿಯಸ್ ಉಷ್ಣಾಂಶವಿದ್ದು, ಯೋಧನ ಮೃತದೇಹ ಸಾಗಾಟಕ್ಕೆ ಹವಾಮಾನ ವೈಪರೀತ್ಯದಿಂದಾಗಿ ತೀವ್ರ ಅಡಚಣೆಯಾಗಿದೆ. ಮೃತದೇಹ ಮುಖ್ಯಕೇಂದ್ರ ಪನಾಲಿ ಪೈನ್ ಕೋಸ್ಟ್ಗೆ ತಲುಪಲು 300 ಕಿ.ಮೀ. ದೂರವಿದ್ದು, ಅಲ್ಲಿಂದ ಚಂಡೀಗಢಕ್ಕೆ ಸೋಮವಾರ ಮಧ್ಯಾಹ್ನ ತಲುಪಿಸಿ, ಬೆಂಗಳೂರು ಮೂಲಕ ಮಂಗಳವಾರ ಕೊಡಗಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಯೋಧ ರಾಜೇಶ್ ಅವರ ತಂದೆ ಹಾಗೂ ತಾಯಿ ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಶಿಲ್ಪ ಹಾಗೂ ಪುತ್ರಿ ಇಂಚರಾಳೊಂದಿಗೆ ಬೇತ್ರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಮೃತ ಯೋಧನಿಗೆ ಸಹೋದರಿಯರಾದ ಶೈಲಜಾ ಹಾಗೂ ಶಾರದಾ ಇದ್ದು, ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.