ಸಿದ್ದಾಪುರ, ನ. 18: ಇತ್ತೀಚೆಗೆ ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿಗೆ ನುಗ್ಗಿ ಕುರಾನ್ ಗ್ರಂಥವನ್ನು ಸುಟ್ಟಿರುವ ಘಟನೆಯನ್ನು ಖಂಡಿಸಿ ಸಿದ್ದಾಪುರ ಮುಸ್ಲಿಂ ಸಮಾಜದ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಸಂದರ್ಭ ಮಾನವ ಸರಪಳಿಯನ್ನು ರಚಿಸಿ ಪವಿತ್ರ ಕುರಾನ್ ಸುಟ್ಟು ಹಾಕಿರುವ ಘಟನೆಯನ್ನು ಸಮಾಜದ ಸದಸ್ಯರು ಖಂಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾ.ಪಂ ಸದಸ್ಯ ಅಬ್ದುಲ್ ಶುಕೂರ್ ಮಾತನಾಡಿ, ಐಗೂರಿನಲ್ಲಿರುವ ಮಸೀದಿಗೆ ಕೆಲವು ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ ಮುಸ್ಲಿಮರ ಪವಿತ್ರ ಗ್ರಂಥ ಕುರಾನನ್ನು ಸುಟ್ಟು ನಾಶಪಡಿಸಿರುವ ಘಟನೆ ನಡೆದು 10 ದಿನಗಳು ಕಳೆದರೂ ಈವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸದಿರುವದು ಖಂಡನೀಯ ಎಂದರು. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯದವರು ಹೋರಾಟ ನಡೆಸುವದಾಗಿ ತಿಳಿಸಿದರು.
ಸಂಘಟನೆಯ ಪ್ರಮುಖ ಮುಸ್ತಫ ಮಾತನಾಡಿ, ಪವಿತ್ರ ಕುರಾನನ್ನು ಸುಟ್ಟಿರುವ ಘಟನೆಯು ಹೇಯ ಕೃತ್ಯವಾಗಿದೆ. ಯಾವದೇ ಗ್ರಂಥವನ್ನು ಗೌರವಿಸಬೇಕು ಹೊರತು ಗ್ರಂಥವನ್ನು ಸುಡುವದು ನೀಚ ಕೃತ್ಯ ಎಂದರು. ಐಗೂರಿನ ಕುರಾನ್ ಸುಟ್ಟ ಘಟನೆ ಸಂಬಂಧಿಸಿ ಸಂಸದೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಖಂಡನೀಯವಾಗಿದ್ದು, ಅವರ ವಿರುದ್ಧ ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಪ್ರಮುಖರಾದ ವಿ.ಕೆ. ಬಷೀರ್, ಶೌಕತ್ ಆಲಿ, ಕೆ.ಸಿ ಬಷೀರ್, ಹುಸೈನ್, ಜಾಫರ್ ಆಲಿ, ಹನೀಫ ಸೇರಿದಂತೆ ಇನ್ನಿತರರು ಇದ್ದರು.