ಸೋಮವಾರಪೇಟೆ, ಡಿ. 15: ಐಗೂರು ಗ್ರಾಮದ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಧರಣೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದರೂ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಎಂದು ಜೆಡಿಎಸ್ ಬಿಂಬಿಸುತ್ತಿರುವದು ಖಂಡನೀಯ ಎಂದು ಐಗೂರು ಬಿಜೆಪಿ ಸ್ಥಾನೀಯ ಸಮಿತಿ ಹೇಳಿದೆ.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಬೆಳ್ಳಿಯಪ್ಪ ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆ ಐಗೂರಿನ ಮಸೀದಿಯಲ್ಲಿದ್ದ ಕುರ್‍ಆನ್ ಸುಟ್ಟ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿರುವದು ಶ್ಲಾಘನೀಯ. ಆದರೆ ಐಗೂರು ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯರುಗಳು ಬಂಧಿತ ಆರೋಪಿ ಧರಣೇಶ್ ಸಂಘ ಪರಿವಾರದ ಕಾರ್ಯಕರ್ತನೆಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವದು ಖಂಡನೀಯ ಎಂದರು.

ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಬೂತ್ ಸಮಿತಿ ಸದಸ್ಯನಾಗಿ ಧರಣೇಶ್ ಕಾರ್ಯನಿರ್ವಹಿಸಿರುವದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹೀಗಿದ್ದರೂ ಇಂತಹ ಹೇಯ ಕೃತ್ಯವನ್ನು ಖಂಡಿಸುವದನ್ನು ಬಿಟ್ಟು ಇತರೆ ಪಕ್ಷಗಳತ್ತ ಬೊಟ್ಟು ಮಾಡುವದನ್ನು ಜೆಡಿಎಸ್ ಕೈ ಬಿಡಬೇಕು ಎಂದು ಸಲಹೆ ನೀಡಿದರು.

ಐಗೂರು ಹಾಗೂ ಹೊಸತೋಟದಲ್ಲಿ ಟಿಪ್ಪು ಜಯಂತಿ ಸಂದರ್ಭ ಕೊಡಗು ಬಂದ್‍ಗೆ ಸಹಕರಿಸುವಂತೆ ಮುಸ್ಲಿಂ ಸಮುದಾಯದಲ್ಲಿ ತಾವುಗಳು ಮನವಿ ಮಾಡಿದ್ದೆವು. ಇದಕ್ಕೆ ಪೂರಕವಾಗಿ ಮುಸ್ಲಿಂ ಸಮುದಾಯವೂ ಅಂಗಡಿ ಮುಂಗಟ್ಟು ಮುಚ್ಚಿ ಮನವಿಯನ್ನು ಪುರಸ್ಕರಿಸಿತ್ತು. ಈ ಹಿನ್ನೆಲೆ ಯಾವದೇ ಗಲಭೆ ಸಂಭವಿಸಲಿಲ್ಲ. ಇದನ್ನು ಸಹಿಸದ ಜೆಡಿಎಸ್‍ನ ಧರಣೀಶ್ ಸಾಮಾಜಿಕ ಸಾಮರಸ್ಯ ಕದಡುವ ಹುನ್ನಾರದಿಂದ ಇಂತಹ ಕೃತ್ಯಕ್ಕೆ ಕೈಹಾಕಿರಬಹುದು. ಇದು ಸ್ಥಳೀಯವಾಗಿ ಎಲ್ಲರಿಗೂ ತಿಳಿದ ವಿಷಯವಾಗಿದ್ದರೂ, ಜೆಡಿಎಸ್‍ನ ಕೆಲವರು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಸಲುವಾಗಿ ಬಿಜೆಪಿಯ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು.

ಕುರ್‍ಆನ್ ಸುಟ್ಟ ಪ್ರಕರಣದಿಂದ ಈಗಾಗಲೇ ಐಗೂರು ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇಂತಹ ಸನ್ನಿವೇಶದಲ್ಲಿ ಅನಗತ್ಯ ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ಜೆಡಿಎಸ್ ದೊಡ್ಡದು ಮಾಡಲು ಹೊರಟಿದೆ. ಅಲ್ಲದೇ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಪ್ರಕಾಶ್ ಆರೋಪಿಸಿದರು.

ಗೋಷ್ಠಿಯಲ್ಲಿ ಐಗೂರು ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಟಿ.ಆರ್.ವಿಜಯ, ಉಪಾಧ್ಯಕ್ಷ ಟಿ.ಕೆ.ಭಾಸ್ಕರ, ಪದಾಧಿಕಾರಿಗಳಾದ ಚನ್ನಕೇಶವ, ಅವಿಲಾಷ್ ಇದ್ದರು.