ಮಡಿಕೇರಿ, ಜ. 29: ಮಾದಾಪುರ ವ್ಯಾಪ್ತಿಯಲ್ಲಿ ಜಿ.ಪಂ. ಅನುದಾನದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸ್ಥಳೀಯ ಸದಸ್ಯೆ ಕುಮುದಾ ಧರ್ಮಪ್ಪ ಕಾಮಗಾರಿ ಪರಿಶೀಲಿಸಿದರು.

ಮಾದಾಪುರದ ಇಗ್ಗೋಡ್ಲು ಬೆಟ್ಟ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಗೊಳ್ಳುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ರೂ. 1.50 ಲಕ್ಷ ವೆಚ್ಚದಲ್ಲಿ ಮಾದಾಪುರ ಸರಕಾರಿ ಪ್ರೌಢಶಾಲೆಗೆ ಮೇಲ್ಚಾವಣಿ ಅಳವಡಿಕೆ, ಗರಗಂದೂರು ಪ್ರಾಥಮಿಕ ಶಾಲೆಯಲ್ಲಿ ರೂ.1 ಲಕ್ಷದಲ್ಲಿ ವಿವಿಧ ಕಾಮಗಾರಿ, ಕಾನ್‍ಬೈಲು ಪ್ರೌಢಶಾಲೆಯಲ್ಲಿ 1.50 ಲಕ್ಷ ರೂ.ಗಳಲ್ಲಿ ರಂಗಮಂದಿರ ನಿರ್ಮಾಣ, ಕುಂಬೂರು ಪೈಸಾರಿಯಲ್ಲಿ ರೂ.2 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಹಟ್ಟಿಹೊಳೆಯಲ್ಲಿ 2.50 ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ನಾಕೂರು ಶಿರಂಗಾಲದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾರ್ಯ ನಡೆಯುತ್ತಿದೆ ಎಂದು ಕುಮುದಾ ಧರ್ಮಪ್ಪ ಇದೇ ಸಂದರ್ಭ ತಿಳಿಸಿದರು. ಈಗಾಗಲೇ ರೂ.50 ಸಾವಿರ ವೆಚ್ಚದಲ್ಲಿ ಮಾದಾಪುರ ಆಸ್ಪತ್ರೆಗೆ ಬಣ್ಣ ಬಳಿಯುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು. ಈ ಸಂದರ್ಭ ಜಿ.ಪಂ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.