ಮಡಿಕೇರಿ, ಡಿ. 16: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವದರಿಂದ ಜನತೆಗೆ ಅಗತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಖಾತ್ರಿಯಡಿ ಉದ್ಯೋಗ ಕಲ್ಪಿಸಿಕೊಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚನೆ ನೀಡಿದ್ದಾರೆ.ಸಚಿವ ಸಂಪುಟದ ಉಪಸಮಿತಿ ವತಿಯಿಂದ ಬರ ಅಧ್ಯಯನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವ ಸಲುವಾಗಿ ಬಂದಿದ್ದು, ಪ್ರಮುಖವಾಗಿ ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಇಲ್ಲದವರಿಗೆ ಉದ್ಯೋಗ ಕಲ್ಪಿಸಬೇಕೆಂದು ಹೇಳಿದರು. ಜಿಲ್ಲೆಯಲ್ಲಿ 564 ಹಳ್ಳಿಗಳ ಪೈಕಿ 34 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಕಳೆದ 2 ವರ್ಷಗಳಲ್ಲಿ 539 ಕಾಮಗಾರಿಗಳಿಗೆ ರೂ. 35.24 ಕೋಟಿ ಹಣ ಮಂಜೂರಾಗಿದ್ದು, ಈ ಪೈಕಿ ರೂ. 20 ಕೋಟಿ ವೆಚ್ಚವಾಗಿದೆ. ಇನ್ನೂ 15.24 ಕೋಟಿ ಬಿಡುಗಡೆಯಾಗಬೇಕಿದೆ ಎಂದು ಜಿ.ಪಂ. ಅಭಿಯಂತರರು ಮಾಹಿತಿ ನೀಡಿದರು.
ಈ ವರ್ಷ ಟಾಸ್ಕ್‍ಫೋರ್ಸ್‍ಗೆ ತಾಲೂಕಿಗೆ ರೂ. 60 ಲಕ್ಷದಂತೆ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು, ಎಷ್ಟು ಅನುದಾನ ಬೇಕಾಗಬಹುದೆಂದು ಅಂದಾಜಿಸಿ ಸರಿಯಾಗಿ ಕ್ರಿಯಾ ಯೋಜನೆ ಮಾಡಬೇಕು. ಇದೀಗ ಕ್ರಿಯಾಯೋಜನೆ ಮಾಡುವಾಗ ತಪ್ಪಾಗಿದ್ದು, ಅನುದಾನ ಕಡಿಮೆಯಾಗಿದೆ.
(ಮೊದಲ ಪುಟದಿಂದ) ಬಾಕಿ ಉಳಿದಿರುವ 15.24 ಕೋಟಿ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.
ಸಭೆಯಲ್ಲಿದ್ದ ಆರೋಗ್ಯ ಇಲಾಖೆ ಸಚಿವ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಸಮಸ್ಯೆಗಳಿರುವ ಗ್ರಾಮಗಳಲ್ಲಿ ಯಾರೇ ಮನವಿ ಸಲ್ಲಿಸಿದರೂ ಪರಿಗಣಿಸಬೇಕು. ತಾ.ಪಂ., ಜಿ.ಪಂ., ಶಾಸಕರುಗಳ ಅನುದಾನವನ್ನು ಕೂಡ ಇದಕ್ಕೆ ಬಳಸಿಕೊಳ್ಳಬೇಕು. ನೀರು ಮುಖ್ಯವಾಗಿದ್ದು, ಸಾರ್ವಜನಿಕರಿಗೆ ನೀರಿಗೆ ತೊಂದರೆಯಾಗಬಾರದೆಂದು ಹೇಳಿದರು.
ಮೇವು
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಸಿಗುವಂತಾಗಬೇಕು. ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಿಂದ ಯಾವದೇ ಕಾರಣಕ್ಕೂ ಹೊರರಾಜ್ಯಗಳಿಗೆ ಮೇವು ಸಾಗಾಟವಾಗುವದನ್ನು ನಿರ್ಬಂಧಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ಡಿಚರ್ಡ್ ವಿನ್ಸೆಂಟ್ ಡಿಸೋಜ ಅವರು, ಮೂರು ತಾಲೂಕುಗಳಲ್ಲಿ ಮೇವು ಸಂಗ್ರಹಿಸಿಡಲು ಕ್ರಮ ಕೈಗೊಳ್ಳಲಾಗಿದೆ. ಹಾಸನ ಹಾಗೂ ಕೇರಳಕ್ಕೆ ಮೇವು ಹೆಚ್ಚಿಗೆ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಚೆಕ್‍ಪೋಸ್ಟ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬರ ಪರಿಸ್ಥಿತಿ ಇರುವ ನಿಟ್ಟಿನಲ್ಲಿ ಉದ್ಯೋಗ ಇಲ್ಲದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕೆಂದು ಹೇಳಿದರು.
ಪರಿಹಾರ
ಕೃಷಿ ಫಸಲು ನಷ್ಟಗೊಂಡ ರೈತರಿಗೆ ಯಾವದೇ ವಂಚನೆಯಾಗದಂತೆ ಪರಿಹಾರ ಒದಗಿಸುವಂತಾಗಬೇಕು. ಕೆಲವರಿಗೆ ಅರ್ಜಿ ಸಲ್ಲಿಸಬೇಕೆಂದು ಗೊತ್ತಿರುವದಿಲ್ಲ. ಪ್ರತಿ ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಿಗರ ಮೂಲಕ ಕಾರ್ಯಾಗಾರ ಮಾಡಿ ಮಾಹಿತಿ ನೀಡಬೇಕು. ದೂರುಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಹೇಳಿದರು.
ಉಪವಿಭಾಗಾಧಿಕಾರಿ ತರಾಟೆಗೆ
ಅಕ್ರಮ - ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ ಅವರು, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಾರಕ್ಕೊಂದು ಬಾರಿ ಸಭೆ ಕರೆಯಬೇಕೆಂದು ಸರಕಾರದ ಆದೇಶವಿದ್ದರೂ, ಆದೇಶವನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲದ ನೀವುಗಳು ಏನ್ ಮಾಡ್ತಿದ್ದೀರಾ, ಏನ್ ತಿಳ್ಕೊಂಡಿದ್ದೀರಾ ನೀವು ಎಂದು ಖಾರವಾಗಿ ಪ್ರಶ್ನಿಸಿದರು. ಒಂದು ಹಂತದಲ್ಲಿ ‘ಹುಚ್ಚ', ‘ಉಪವಿಭಾಗಾಧಿಕಾರಿಗೆ ಅಮಲು ಇಳಿದಿಲ್ಲ' ಎಂಬೆಲ್ಲ ಮಾತುಗಳು ಪ್ರಯೋಗವಾದವು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕೊಡ್ಲಿಪೇಟೆಯಲ್ಲಿ 3 ತಿಂಗಳಿನಿಂದ ನೀರಿನ ಸರಬರಾಜು ಇಲ್ಲದಿರುವ ಬಗ್ಗೆ ಗಮನ ಸೆಳೆದಾಗ ಒಂದು ವಾರದಲ್ಲಿ ನೀರು ಒದಗಿಸುವಂತೆ ಸಚಿವರು ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಆಹಾರ ಸಚಿವ ಯು.ಟಿ. ಖಾದರ್, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ಸಚಿವ ಮಹದೇವಪ್ರಸಾದ್, ಉಸ್ತುವಾರಿ ಕಾರ್ಯದರ್ಶಿ ಜಯಂತಿ ಇದ್ದರು. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು, ಕುಮುದಾ ಧರ್ಮಪ್ಪ, ಲತೀಫ್ ನೀರಿನ ಸಮಸ್ಯೆ ಬಗ್ಗೆ ವಿಚಾರ ಪ್ರಸ್ತಾಪ ಮಾಡಿದರು.