ಮಡಿಕೇರಿ, ನ. 29: ನಗರದ ಲ್ಲಿರುವ ನೀರಿನ ಜಲಮೂಲಗಳನ್ನು ಬಳಸಿಕೊಂಡು ರೂ. 1.34 ಕೋಟಿ ನಗರಸಭೆಯ ಉಳಿಕೆ ಹಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ಟ್ರ್ಯಾಕ್ಟರ್ ತೆರಳದೆಡೆ ಕಂಟೈನರ್‍ಗಳನ್ನು ಬಳಸಿಕೊಂಡು ಕಸವಿಲೇವಾರಿ ಮಾಡುವದಕ್ಕೆ ಇನ್ನಷ್ಟು ಹೆಚ್ಚು ಟಿಪ್ಪರ್ ಖರೀದಿಗೆ ನಗರಸಭೆ ನಿರ್ಣಯ ಕೈಗೊಂಡಿದೆ.ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು. ನಗರಸಭಾ ಹಿರಿಯ ಸದಸ್ಯ ಚುಮ್ಮಿ ದೇವಯ್ಯ ವಿಷಯ ಪ್ರಸ್ತಾಪಿಸಿ ಮಾತನಾಡಿ, ಕುಡಿಯುವ ನೀರಿನ ಜಲಮೂಲಗಳನ್ನು ಬಳಸುವ ನಿಟ್ಟಿನಲ್ಲಿ ನಗರಸಭೆ ಯಾವ ಕ್ರಮಕೈಗೊಂಡಿದೆ. ಕನ್ನಂಡಬಾಣೆ ಯಲ್ಲಿರುವ ನೀರಿನ ಜಲಮೂಲವನ್ನು ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಈಗಾಗಲೇ 200 ಲೋಡ್ ಮಣ್ಣು ಹಾಕಲಾಗಿದೆ. ಈ ಬಗ್ಗೆ ನಗರಸಭೆಯ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ತಾಳಲಾಗಿದೆ. ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜಾಗದ ಕನ್ವರ್ಷನ್ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸಂಗೀತ ಪ್ರಸನ್ನ ಅವರು ಟ್ರ್ಯಾಕ್ಟರ್‍ನಲ್ಲಿ ಮಣ್ಣು ತಂದು ಹಾಕುತ್ತಿರುವಾಗಲೇ ಗಮನಿಸಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಕ್ರಮಕೈಗೊಳ್ಳಲು ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳಿಂದ ಸಮಜಾಯಿಷಿಕೆ ಬೇಕು ಎಂದು ಸದಸ್ಯ ಅಮೀನ್ ಮೊಹಿಸಿನ್ ಆಗ್ರಹಿಸಿದರೆ, ಜಲಮೂಲಗಳನ್ನು ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ. ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಪಿ.ಡಿ. ಪೊನ್ನಪ್ಪ ಒತ್ತಾಯಿಸಿದರು.
ಕನ್ನಂಡಬಾಣೆ ಜಲಮೂಲದಿ ಂದ ದೇಚೂರು, ರಾಘವೇಂದ್ರ ದೇವಸ್ಥಾನ ಭಾಗ, ಚೈನ್‍ಗೇಟ್, ಜಿಲ್ಲಾಸ್ಪತ್ರೆಗೆ ನೀರನ್ನು ಒದಗಿಸ ಲಾಗುತ್ತಿದೆ. ಜಲಮೂಲಕ್ಕೆ ಮಣ್ಣು ಹಾಕಿದವರಿಂದಲೇ ಮತ್ತೆ ಮಣ್ಣನ್ನು ತೆಗೆಸಬೇಕು
(ಮೊದಲ ಪುಟದಿಂದ) ಎಂದು ಕೆ.ಎಸ್. ರಮೇಶ್ ಆಗ್ರಹಿಸಿದರು. ಕನ್ವರ್ಷನ್ ಅವಧಿ ಮುಗಿದಿರುವವರಿಗೆ ನೋಟಿಸ್ ಜಾರಿ ಮಾಡಿ ಮಣ್ಣು ತೆಗೆಸುವಂತೆ ನಿರ್ಣಯ ಮಾಡಲಾಯಿತು. ಬಫರ್‍ಜೋನ್ ಬಳಸಿ ನೀರಿನ ಜಲಮೂಲವನ್ನು ಉಳಿಸಿಕೊಳ್ಳುವ ನಿರ್ಣಯಕ್ಕೆ ಎಲ್ಲಾ ಸದಸ್ಯರು ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದರು.
ಕಸ ವಿಲೇವಾರಿಗೆ ಕಂಟೈನರ್‍ಗಳನ್ನು ಬಳಸದಂತೆ ಇರುವ ಆದೇಶದ ಹಿನ್ನೆಲೆಯಲ್ಲಿ ನಗರದಲ್ಲಿರಿಸಿದ್ದ ಕಂಟೈನರ್‍ಗಳನ್ನು ನಗರಸಭೆ ವತಿಯಿಂದ ತೆಗೆದಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕಂಟೈನರ್‍ಗಳನ್ನು ಏಕಾಏಕಿ ತೆಗೆದಿರುವದು ಸರಿಯಲ್ಲ. ಟಿಪ್ಪರ್ ಅಥವಾ ಆಟೋಗಳನ್ನು ಕಸವಿಲೇವಾರಿಗೆ ಹೆಚ್ಚು ಬಳಸಬೇಕು ಎಂದು ಹಿರಿಯ ಸದಸ್ಯ ಪಿ.ಡಿ. ಪೊನ್ನಪ್ಪ ಹೇಳಿದರು.
ಕಂಟೈನರ್ ಅವಶ್ಯಕತೆ ಇಲ್ಲದ ಕಡೆಗಳಲ್ಲಿ ತೆಗೆದು ಉಳಿದೆಡೆ ಸಮಯಾವಕಾಶ ನೀಡಿ ಬಳಿಕ ತೆಗೆಯಬೇಕಿತ್ತು ಎಂದು ಅಮೀನ್ ಮೊಹಿಸಿನ್ ಅಸಮಾಧಾನ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ ಹೋಗುವ ಕಡೆಗಳಲ್ಲಿ ಕಂಟೈನರ್ ಅವಶ್ಯಕತೆ ಇಲ್ಲ. ಟ್ರ್ಯಾಕ್ಟರ್ ಹೋಗದೆಡೆಗಳಲ್ಲೂ ಕಂಟೈನರ್ ಅವಶ್ಯಕತೆ ಇದೆ ಎಂದು ಸದಸ್ಯರಾದ ಕೆ.ಎಸ್. ರಮೇಶ್, ಉಣ್ಣಿಕೃಷ್ಣ ಹಾಗೂ ಇನ್ನಿತರರು ಆಗ್ರಹಿಸಿದರು.
ಕಸ ವಿಲೇವಾರಿ ಮಾಡುತ್ತಿರುವ ಸ್ತ್ರೀಶಕ್ತಿ ಗುಂಪುಗಳಿಗೆ ಬಾಕಿಯಿರುವ ಬಿಲ್ ಪಾವತಿಸುವಂತೆ ಸದಸ್ಯರಾದ ಶ್ರೀಮತಿ ಬಂಗೇರ, ಮನ್ಸೂರ್ ಆಗ್ರಹಿಸಿದರು.
ಕಸ ವಿಲೇವಾರಿ ಟೆಂಡರ್‍ದಾರರ ಅವಧಿ ನ. 30ಕ್ಕೆ ಮುಗಿದಿದ್ದರೂ, ಒಂದು ತಿಂಗಳ ಮೊದಲೇ ಟೆಂಡರ್ ಕರೆಯಬೇಕಾಗಿದ್ದರೂ, ಇದುವರೆಗೂ ಕರೆದಿಲ್ಲ ಎಂದು ಕೆ.ಎಸ್. ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕಸವಿಲೇವಾರಿ ಕಾರ್ಮಿಕರಿಗೆ ಗುತ್ತಿಗೆದಾರ 3 ತಿಂಗಳಿನಿಂದ ಸಂಬಳ ಪಾವತಿಸಿಲ್ಲ. ದೈನಂದಿನ ಸಂಬಳ ಸಿಗುತ್ತಿಲ್ಲ ಎಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಸಾಲಿನ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಇದೇ ಸಂದರ್ಭ ತೆರಿಗೆ ಪರಿಷ್ಕರಣೆ ಮಾಡಲಾಯಿತು. ಈ ಹಿಂದಿನ ಸಾಲಿನಂತೆ ಶೇ. 15 ರಂತೆ ನಿಗದಿ ಪಡಿಸಲಾಯಿತು. ಸರಕಾರದ ಆದೇಶದಂತೆ ಕನಿಷ್ಟ ಶೇ. 15 ರಿಂದ ಗರಿಷ್ಠ 30 ರಷ್ಟು ಏರಿಕೆ ಮಾಡಬೇಕೆನ್ನುವ ಪೌರಾಯುಕ್ತರ ಹೇಳಿಕೆಗೆ ಎಲ್ಲಾ ಸದಸ್ಯರು ಕನಿಷ್ಟ ಶೇ. 15 ರಷ್ಟು ನಿಗದಿ ಮಾಡುವಂತೆ ಒಕ್ಕೊರಲಿನಿಂದ ಹೇಳಿದರು. ಮಹದೇವಪೇಟೆ ರಸ್ತೆಗೆ ಕವರಿಂಗ್ ಸ್ಲ್ಯಾಬ್ ಮಾಡಿಲ್ಲ. ಇದರಿಂದ ಸಮಸ್ಯೆಯಾಗಿದೆ. ಶೀಘ್ರ ಕವರಿಂಗ್ ಸ್ಲ್ಯಾಬ್, ಇಂಟರ್‍ಲಾಕ್ ಅಳವಡಿಸುವಂತೆ ಸದಸ್ಯ ಟಿ.ಹೆಚ್. ಉದಯಕುಮಾರ್ ಆಗ್ರಹಿಸಿದರು.
ಸಭೆಯಲ್ಲಿ ಪೌರಾಯುಕ್ತೆ ಶುಭ ಹಾಗೂ ಸದಸ್ಯರು ಹಾಜರಿದ್ದರು.