ಆಲೂರುಸಿದ್ಧಾಪುರ, ಅ.24: ಸಮೀಪದ ನಿಡ್ತ ಗ್ರಾ.ಪಂ.ವ್ಯಾಪ್ತಿಯ ನಿಡ್ತಕೊಪ್ಪಲು ಗ್ರಾಮದಲ್ಲಿ ಕಳೆದ 2 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಮತ್ತು ಗ್ರಾ.ಪಂ. ಪಿಡಿಓ ಅವರುಗಳನ್ನು ಸ್ಥಳಕ್ಕೆ ಕರೆಸಿಕೊಂಡ ಗ್ರಾಮಸ್ಥರು ಶೀಘ್ರದಲ್ಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿದರು. ನಿಡ್ತ ಗ್ರಾ.ಪಂ.ವ್ಯಾಪ್ತಿಯ ನಿಡ್ತಕೊಪ್ಪಲು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಸಮುದಾಯದ ಕಾಲೋನಿ ಸೇರಿದಂತೆ ಸುಮಾರು 65 ಕುಟುಂಬಗಳು ವಾಸವಾಗಿದ್ದಾರೆ. ಕಳೆದ 25 ವರ್ಷದ ಹಿಂದೆಯೇ ನಿಡ್ತಕೊಪ್ಪಲು ಗ್ರಾಮದ ನಿವಾಸಿಗಳಿಗೆ ಸದರಿ ಗ್ರಾ.ಪಂ.ಯಿಂದ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಆದರೆ ಇತ್ತೀಚಿನ 2 ವರ್ಷದಲ್ಲಿ ಗ್ರಾಮದ ಖಾಸಗಿಯವರು ತಮ್ಮ ತೋಟ, ಗದ್ದೆಗಳಲ್ಲಿ ಕೊಳವೆ ಬಾವಿಯನ್ನು ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗತೊಡಗಿತು. ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಯಲ್ಲಿ ಸಂಪೂರ್ಣವಾಗಿ ನೀರು ಬತ್ತಿಹೋಗಿದೆ, ಇದರಿಂದ ಸಂಬಂಧಪಟ್ಟ ಗ್ರಾ.ಪಂ.ಯಿಂದ ಈ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವದನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಗ್ರಾ.ಪಂ.ಯವರ ಗಮನಕ್ಕೆ ತಂದಿದ್ದರು. ಗ್ರಾ.ಪಂ. ಗ್ರಾಮಕ್ಕೆ ಕುಡಿಯುವ ನೀರಿನ ಬದಲಿ ವ್ಯವಸ್ಥೆ ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಕೆ.ಎಂ.ಮುಸ್ತಫಾ, ಸದಸ್ಯರು ಹಾಗೂ ಗ್ರಾ.ಪಂ. ಪಿಡಿಓ ಅವರುಗಳನ್ನು ಕರೆಸಿಕೊಂಡರು. ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ ಮತ್ತು ಪಿಡಿಓ ಪ್ರತಿಮಾ ಗ್ರಾಮದ ಖಾಸಗಿಯವರಿಗೆ ಸೇರಿದ ಕೊಳವೆಬಾವಿ ಹೊಂದಿರುವ ಮಾಲೀಕರನ್ನು ಸಂಪರ್ಕಿಸಿ ಗ್ರಾಮಕ್ಕೆ ಕುಡಿಯುವ ನೀರಿನ ಬದಲಿ ವ್ಯವಸ್ಥೆ ಮಾಡಿಕೊಡುವ ತನಕ ಗ್ರಾಮದ ಖಾಸಗಿಯವರ ಕೊಳವೆಬಾವಿಯ ಮೂಲಕ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸಿಕೊಡಲಾಗುವದೆಂದು ಭರವಸೆ ನೀಡಿದರು. ಖಾಸಗಿ ಕೊಳವೆ ಬಾವಿ ಮಾಲೀಕರು ಗ್ರಾಮಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವದಾಗಿ ತಿಳಿಸಿದರು.
ನಿಡ್ತಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿರುವದು ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿ.ಪಂ.ಯಿಂದ ಕ್ರಮಕೈಗೊಳ್ಳಲಾಗಿದೆ, ಗ್ರಾಮಕ್ಕೆ ನೂತನವಾಗಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುವ ಕುರಿತು ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಬದಲಿ ವ್ಯವಸ್ಥೆ ಮಾಡಿಕೊಡುವ ತನಕ ಖಾಸಗಿಯವರಿಗೆ ಸೇರಿದ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಬಳಕೆ ಮಾಡಿಕೊಂಡು ಸಹಕರಿಸಬೇಕೆಂದು ಜಿ.ಪಂ. ಸದಸ್ಯೆ ಸರೋಜಮ್ಮ ಮನವಿ ಮಾಡಿದರು.