ಸೋಮವಾರಪೇಟೆ, ಅ. 3: ಸಮೀಪದ ಕಿರಗಂದೂರು ಗ್ರಾಮದಲ್ಲಿ ವೈದ್ಯರೆಂದು ನಂಬಿಸಿ ಗ್ರಾಮಸ್ಥರನ್ನು ವಂಚಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ನಾಲ್ವರು ವೈದ್ಯರನ್ನೊಳಗೊಂಡ ತಂಡ ಕಿರಗಂದೂರು ಗ್ರಾಮ ಪಂಚಾಯಿತಿಗೆ ಆಗಮಿಸಿ ವಿವರಣೆ ಪಡೆಯಿತು.

ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ವಂಚನೆಗೊಳಗಾದ ನಾಗವೇಣಿ ಹಾಗೂ ರಾಧಾಮಣಿ ಅವರುಗಳು ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಕಿರಗಂದೂರು ಗ್ರಾಮ ಪಂಚಾಯಿತಿಗೆ ಆಗಮಿಸಿ ಹೇಳಿಕೆ ಪಡೆದರು. ನಂತರ ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ ಅವರುಗಳು ಗ್ರಾಮಸ್ಥರಿಂದ ಪ್ರತ್ಯೇಕ ಹೇಳಿಕೆ ಪಡೆದರು.

ಈ ಸಂದರ್ಭ ಕಿರಗಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಬಿ.ಸುರೇಂದ್ರ ಹಾಗು ಸದಸ್ಯ ಭರತ್ ಮಾತನಾಡಿ, ಸರ್ಕಾರಿ ವೈದ್ಯರೆಂದು ನಂಬಿಸಿರುವದಲ್ಲದೇ ಗ್ರಾಮದಲ್ಲಿರುವ ಎರಡು ಅಂಗನವಾಡಿ ಕಾರ್ಯಕರ್ತೆ ಯರಾದ ಚಂದ್ರಿಕ ಹಾಗೂ ದಾಕ್ಷಾಯಿಣಿ ಅವರುಗಳನ್ನು ಬಳಸಿಕೊಂಡು ಗ್ರಾಮದಲ್ಲಿನ ಮನೆ ಮನೆಗಳಿಗೆ ತೆರಳಿ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿದರು.

ಇದರೊಂದಿಗೆ ಗ್ರಾಮದ ವಿಘ್ನೇಶ್ವರ ಸಮುದಾಯ ಭವನದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮವೆಂದು ಸುಳ್ಳು ಹೇಳಿ ಶಿಬಿರವನ್ನು ನಡೆಸಲಾಗಿದೆ. ಈ ಕುರಿತು ಪ್ರಶ್ನಿಸಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ತಮ್ಮನ್ನು ಪ್ರಶ್ನಿಸಲು ಯಾವದೇ ಅಧಿಕಾರವಿರುವದಿಲ್ಲ. ಏನಿದ್ದರೂ ಪೊಲೀಸ್ ಠಾಣೆಯಲ್ಲಿ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ದೂರು ಬಂದಿದ್ದರ ಕುರಿತು ಸ್ಪಷ್ಟನೆ ಕೇಳಿದ ತಮ್ಮಿಬ್ಬರ ಮೇಲೆಯೇ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡಲೇ ಅಮಾನತು ಮಾಡುವದರೊಂದಿಗೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಂತರ ದೂರುದಾರರಾದ ನಾಗವೇಣಿಯವರನ್ನು ಸ್ಥಳಕ್ಕೆ ಕರೆಸಿದ ತನಿಖಾ ತಂಡ ಹೇಳಿಕೆ ಪಡೆಯಿತು. ಈ ಸಂದರ್ಭ ನಾಗವೇಣಿ ಮಾತನಾಡಿ, ತಮ್ಮನ್ನು ತಪಾಸಣೆ ನಡೆಸಿದ ವೈದ್ಯರು ನಿಮ್ಮ ಕಿಡ್ನಿಯಲ್ಲಿ ಕಲ್ಲಿದೆ, ಕೂಡಲೇ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರಲ್ಲದೇ ರೂ.3 ಸಾವಿರ ಹಣ ಪಡೆದು ಕೆಲವು ಔಷಧಗಳನ್ನು ನೀಡಿದರು ಎಂದರು.

ಮತ್ತೋರ್ವ ಮಹಿಳೆ ರಾಧಾಮಣಿ ತಮಗೆ ಅಸ್ತಮಾವಿದೆ, ಬಹಳ ವರ್ಷಗಳಿಂದ ವಾಸಿ ಯಾಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ ಅವರಲ್ಲಿ ಮನವಿ ಮಾಡಿಕೊಂಡಾಗ, ಅವರು ಗ್ರಾಮದಲ್ಲೇ ಉತ್ತಮ ವೈದ್ಯರಿದ್ದಾರೆ. ಅವರಲ್ಲಿ ತಪಾಸಣೆ ಮಾಡಿಸಿ ಎಂದು ಸಲಹೆ ನೀಡಿದರು. ಅವರ ಮಾತನ್ನು ಕೇಳಿ ರೂ.3 ಸಾವಿರ ಹಣ ಪಾವತಿ ಮಾಡಿ ಔಷಧ ಪಡೆದುಕೊಂಡಿದ್ದೇನೆ. ಈ ಔಷಧಿ ಅಸ್ತಮಾಕ್ಕೆ ಆಗುತ್ತದೆಯೇ? ಎಂದು ತನಿಖಾ ತಂಡದ ವೈದ್ಯರಲ್ಲಿ ಪ್ರಶ್ನಿಸಿದರು. ಔಷಧಗಳನ್ನು ಪರಿಶೀಲಿಸಿದ ಡಾ.ಶಿವಕುಮಾರ್ ಅವಕ್ಕಾದರು. ನಂತರ ಈ ಔಷಧಿಗಳು ಅಸ್ತಮಾ ರೋಗಕ್ಕೆ ಕೊಡುವಂತದ್ದಲ್ಲ ಎಂದು ಸಮಜಾಯಿಸಿಕೆ ನೀಡಿದರು.

ಕಳೆದ ಎರಡು ತಿಂಗಳಿಂದ ಗ್ರಾಮಸ್ಥರಿಗೆ ಔಷಧಗಳನ್ನು ನೀಡಿ ವಂಚಿಸುತ್ತಿದ್ದ ನಕಲಿ ವೈದ್ಯ, ಜಿಲ್ಲಾ ಆರೋಗ್ಯ ಇಲಾಖೆಯ ತನಿಖಾ ತಂಡ ಆಗಮಿಸಿದ ವೇಳೆ ನಾಪತ್ತೆಯಾಗಿದ್ದು ಕಂಡು ಬಂತು. ಅಲ್ಲದೇ ಅವರಿಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಯರಾದ ಚಂದ್ರಿಕಾ ಹಾಗೂ ದಾಕ್ಷಾಯಿಣಿ ಕೂಡ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿರಲಿಲ್ಲ.

ಈಸಂದರ್ಭ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಾ.ಶಿವಕುಮಾರ್, ಗ್ರಾಮದಲ್ಲಿ ಔಷಧಗಳನ್ನು ನೀಡಿ, ತಪಾಸಣೆ ಯನ್ನೂ ಕೂಡ ಮಾಡಿರುವದು ಗ್ರಾಮಸ್ಥರ ಹೇಳಿಕೆಯಿಂದ ತಿಳಿದುಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ಅವರ ವೈದ್ಯಕೀಯ ಸರ್ಟಿಫಿಕೇಟ್ ಹಾಜರುಪಡಿಸಲು ಸೂಚಿಸಲಾಗು ವದು. ಹಾಗೊಂದು ವೇಳೆ ಸಿಗದೇ ಇದ್ದಲ್ಲಿ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಲಾಗುವದು ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ನೂರಾರು ಗ್ರಾಮಸ್ಥರು, ವಂಚಿಸಲು ಸಹಕರಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡಲೇ ಸಸ್ಪೆಂಡ್ ಮಾಡಿ ಇಲ್ಲವೇ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿಯಲಾಗುವದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲೀಲಾವತಿಯವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಪ್ರತಿಕ್ರಿಯೆ ನೀಡಿದ ಲೀಲಾವತಿ, ಗ್ರಾಮದಲ್ಲಿ ಚಿಕಿತ್ಸೆ ಪಡೆದವರ ಹೇಳಿಕೆ ಪಡೆದಿದ್ದೇನೆ. ಎಲ್ಲರೂ ಉತ್ತಮ ಔಷಧಿ, ನಮಗೆ ಗುಣಮುಖವಾಗುತ್ತಿದೆ ಎಂದು ಹೇಳಿದಾಗ, ಸಭೆಯಲ್ಲಿ ಕೋಲಾಹಲ ಏರ್ಪಟ್ಟಿತು. ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷ ಸುರೇಂದ್ರ, ಗ್ರಾಮಸ್ಥರಾದ ಮೋಹನ್, ಶಿವಪ್ಪ, ಈರಪ್ಪ, ಎಸ್.ಪಿ.ರಾಜು ಮತ್ತಿತರರು ಮಾತನಾಡಿ, ನಕಲಿ ವೈದ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಮಾತನಾಡುತ್ತಿದ್ದೀರಿ, ನಿಮಗೂ ಹಣ ಸಂದಾಯ ವಾಗಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು. ಈ ಕುರಿತು ಉಸ್ತುವಾರಿ ಸಚಿವರಿಗೆ ದೂರು ನೀಡಲಾಗುವದು ಎಂದು ಎಚ್ಚರಿಸಿದರು. ನಂತರ ಮಾತನಾಡಿದ ಲೀಲಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗು ವದು ನಂತರ ಮೇಲಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದರು.

ಸಭೆಯಲ್ಲಿ ಕಿರಗಂದೂರು ಗ್ರಾಪಂ ಅಧ್ಯಕ್ಷೆ ರಾಧಾ ಏಜಣ್ಣ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ. ಪಾರ್ವತಿ, ಕ್ಷೇತ್ರೀಯ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ, ಆರೋಗ್ಯ ಇಲಾಖೆ ಜಿಲ್ಲಾ ಅಧೀಕ್ಷಕನಾಗೇಂದ್ರ,

ಗ್ರಾ ಪಂ. ಸದಸ್ಯರುಗಳಾದ ಸುಜತಾ, ಪೊನ್ನಪ್ಪ, ಪಿ.ಸಿ. ಪೊನ್ನಪ್ಪ, ಪ್ರೇಮ, ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.