ಕುಶಾಲನಗರ, ಜು. 16: ಜೀವನದಿ ಕಾವೇರಿ ಸಂರಕ್ಷಣೆಗೆ ಕೇಂದ್ರ ಸರಕಾರದ ಮೂಲಕ ಯೋಜನೆ ರೂಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಗು ವದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆÀ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ಅವರು ಕೊಡಗು ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ರಾಷ್ಟ್ರದ ನದಿಗಳು ಕಲುಷಿತಗೊಳ್ಳುತ್ತಿರುವ ಬಗ್ಗೆ ಈಗಾಗಲೆ ಪ್ರಧಾನಿಗಳು ಚಿಂತನೆ ಹರಿಸಿದ್ದು ಉತ್ತರ ಭಾರತದಲ್ಲಿ ಗಂಗಾ ನದಿ ಸಂರಕ್ಷಣೆಗೆ ಬೃಹತ್ ಯೋಜನೆ ಚಾಲನೆಗೊಂಡಿದೆ. ದಕ್ಷಿಣದ ಕಾವೇರಿ ನದಿ ರಕ್ಷಣೆ ಬಗ್ಗೆ ಪ್ರಧಾನಿಗಳ ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾರ್ಯಯೋಜನೆ ಸಿದ್ದಗೊಳ್ಳಲಿದೆ ಎಂದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಹಾಗೂ ತಮಿಳುನಾಡಿನಿಂದ ತೆರಳಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪದಾಧಿಕಾರಿಗಳ ನಿಯೋಗದ ಮನವಿ ಬಗ್ಗೆ ಪ್ರಧಾನಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಈ ಸಂದರ್ಭ ಮಾಹಿತಿ ನೀಡಿದರು. ಈ ಸಂದರ್ಭ ಕಾವೇರಿ ರಕ್ಷಿಸಿ ಘೋಷಣೆಯುಳ್ಳ ಸ್ಟಿಕ್ಕರ್ ಅನ್ನು ಶೋಭ ಕರಂದ್ಲಾಜೆ ಅವರು ತಮ್ಮ ವಾಹನಕ್ಕೆ ಅಳವಡಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕÀ ಎಂ.ಎನ್.ಚಂದ್ರಮೋಹನ್, ಕೊಡಗು ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ, ನದಿ ಜಾಗೃತಿ ಸಮಿತಿ ಪ್ರಮುಖರಾದ ಕೆ.ಜಿ.ಮನು, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ಪಟ್ಟಡ ಪ್ರಕಾಶ್ ಇದ್ದರು.