ಕುಶಾಲನಗರ, ಸೆ. 21: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕುಶಾಲನಗರ ದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದವು.ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ. ಕೃಷ್ಣ ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು. ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಸತ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಲಾಯಿತು. ಪ್ರತಿಭಟನೆ ಸಂದರ್ಭ ಕಾರ್ಯಕರ್ತ ನೊಬ್ಬ ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಉರುಳುಸೇವೆ ನಡೆಸಿ ಕಾವೇರಿ ನೀರು ಹರಿಸುವದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಯಿತು. ಬಳಿಕ ನಾಡ ಕಚೇರಿಗೆ ತೆರಳಿ ಕಂದಾಯಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಾರಂಗಿ ನೀರು ಬಳಕೆದಾರರ ಸಂಘದ ಆಶ್ರಯದಲ್ಲಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಹಾರಂಗಿ ಜಲಾಶಯದ ಕಾಲುವೆಗಳ ಮೂಲಕ ಹರಿಸುತ್ತಿದ್ದ ನೀರನ್ನು ಸ್ಥಗಿತಗೊಳಿಸಿ ನದಿಗೆ ನೀರು ಹರಿಸುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕೂಡಲೆ ನಾಲೆಗಳ ಮೂಲಕ ರೈತರ ಬೆಳೆಗಳಿಗೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದರು. ಮೆರವಣಿಗೆ ಮೂಲಕ ಕಾವೇರಿ ನೀರಾವರಿ ನಿಗಮದ ಅಧೀಕ್ಷಕರ ಕಚೇರಿಗೆ ತೆರಳಿದ ರೈತರು ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ನೇತೃತ್ವದಲ್ಲಿ ಕೊಪ್ಪ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಕೊಪ್ಪದ ಕಾವೇರಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಸ್ವಲ್ಪಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶÀ ವ್ಯಕ್ತಪಡಿಸಿದರು. ಕುಡಿಯಲು ನೀರಿಲ್ಲದ ಸಂದರ್ಭ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಹರಿಸಲು ಆದೇಶಿಸಿರುವದು ಖಂಡನೀಯ ವಿಚಾರ. ರಾಜ್ಯದಿಂದ ಆಯ್ಕೆ ಯಾಗಿರುವ ಸಂಸದರು ಮೌನವಹಿಸಿರುವದು ವಿಷಾದಕರ ಸಂಗತಿ ಎಂದು ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡಲೆ ಮದ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಡಬೇಕಿದೆ ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾವಲುಪಡೆ ಪ್ರಮುಖರಾದ ರಂಗಸ್ವಾಮಿ ಗೌಡ, ಗಣೇಶ್, ಆನಂದ, ರೈತ ಪ್ರಮುಖರಾದ ಐ.ಎಸ್. ಗಣೇಶ್, ಮಂಜುನಾಥ್, ಕುಮಾರ್, ರಾಮು ಖಾದರ್, ಕರವೇ ಪದಾಧಿಕಾರಿಗಳಾದ ಬಿ.ಎ. ನಾಗೇಗೌಡ, ಬಿ.ಎ. ದಿನೇಶ್ ಕುಮಾರ್, ಕೆ.ಎಲ್. ಮಂಜುನಾಥ್, ದೇವೇಂದ್ರ, ದಿನೇಶ್ ರೈ, ಶಶಿಧರ್, ತೀರ್ಥೇಶ್ ಮತ್ತಿತರರು ಇದ್ದರು.