ಕುಶಾಲನಗರ, ಅ. 8: ಜೀವನದಿ ಕಾವೇರಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಕೇಂದ್ರ ಜಲ ಆಯೋಗದ ಅಧ್ಯಕ್ಷರ ಮುಖಾಂತರ ಸಲ್ಲಿಸಲಾಯಿತು.
ಹಾರಂಗಿ ಜಲಾಶಯದ ವಾಸ್ತವಾಂಶ ಅಧ್ಯಯನಕ್ಕೆ ಆಗಮಿಸಿದ ಸಂದರ್ಭ ಕೇಂದ್ರ ಜಲ ಆಯೋಗದ ಅಧಿಕಾರಿಗಳ ತಂಡವನ್ನು ಹಾರಂಗಿ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಸಮಿತಿಯ ಪ್ರಮುಖರು ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಮನವಿ ಸಲ್ಲಿಸಿದರು. ದಕ್ಷಿಣ ಭಾರತದ ಜೀವ ನದಿಯಾಗಿರುವ ಕಾವೇರಿ ಹಲವಾರು ಕಾರಣಗಳಿಂದ ಕಲುಷಿತಗೊಳ್ಳುವದ ರೊಂದಿಗೆ ನದಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ತಲಕಾವೇರಿಯಿಂದ ಪ್ರಾರಂಭಗೊಂಡು ತಮಿಳುನಾಡಿನ ಪೂಂಪ್ಹಾರ್ ತನಕ ನದಿಯ ಸಂರಕ್ಷಣೆಯಾಗಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸುವದು, ಉಪನದಿಗಳು ಹಾಗೂ ಕಾವೇರಿ ನದಿಯ ಅಭಿವೃದ್ಧಿಗೆ ಒತ್ತು ನೀಡುವದು ಮತ್ತು ಕೊಡಗು ಜಿಲ್ಲೆಯ ಕಾವೇರಿ ನದಿ ತಟಗಳ ಜನರ ಸಮಸ್ಯೆಗಳಿಗೆ ಸ್ಪಂದನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭ ಮನವಿ ಸ್ವೀಕರಿಸಿದ ಕೇಂದ್ರ ಜಲ ಆಯೋಗದ ಉಪ ನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿ, ಮನವಿಯನ್ನು ಆಯೋಗದ ಅಧ್ಯಕ್ಷರ ಮೂಲಕ ಪ್ರಧಾನಿಗಳಿಗೆ ಸಲ್ಲಿಸುವದರೊಂದಿಗೆ ಈ ಬಗ್ಗೆ ಮಾಹಿತಿ ಒದಗಿಸಲಾಗುವದು ಎಂದು ಭರವಸೆ ನೀಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ವೈಶಾಖ್, ಬಿ.ಡಿ. ಅಣ್ಣಯ್ಯ, ಪ್ರವೀಣ್, ಭಾಸ್ಕರ್ನಾಯಕ್ ಇದ್ದರು.