ಕುಶಾಲನಗರ, ನ. 29: ಕಾವೇರಿ ನದಿ ತೀರಗಳ ಒತ್ತುವರಿಯೊಂದಿಗೆ ಹಲವೆಡೆ ಪ್ರವಾಸಿ ಕೇಂದ್ರ ನಿರ್ಮಾಣಗೊಂಡು ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಕುಶಾಲನಗರ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಕುಶಾಲನಗರದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನಿಸರ್ಗಧಾಮದ ಬಳಿ ಖಾಸಗಿ ವ್ಯಕ್ತಿಯೊಬ್ಬರು ನದಿ ತಟದಲ್ಲಿ ಲಾರಿಗಟ್ಟಲೆ ಮಣ್ಣು ಸುರಿಯುವದರೊಂದಿಗೆ ನದಿಯನ್ನೇ ಅಕ್ರಮವಾಗಿ ಒತ್ತುವರಿ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಸುಮಾರು 500 ಮೀ. ಉದ್ದಕ್ಕೂ ನದಿಯ ತಟಕ್ಕೆ ಮಣ್ಣು ಕಲ್ಲು ಸುರಿದು ಸಮತಟ್ಟು

(ಮೊದಲ ಪುಟದಿಂದ) ಮಾಡುತ್ತಿದ್ದು, ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಪ್ರವಾಸಿ ಕೇಂದ್ರದ ಮೇಲ್ಭಾಗದಿಂದ ಹರಿಯುತ್ತಿರುವ ಕಲುಷಿತ ತ್ಯಾಜ್ಯ ಮತ್ತು ನೀರು ನೇರವಾಗಿ ನದಿಗೆ ಹರಿಸಲಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಮೂಲಕ ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಎಂ. ಮಣಿಕುಮಾರ್ ಪತ್ರಿಕೆಯೊಂದಿಗೆ ದೂರಿದ್ದಾರೆ. ಈ ಹಿಂದೆ ಇದೇ ವ್ಯಾಪ್ತಿಯಲ್ಲಿ ಕಟ್ಟಡಗಳಿಂದ ಶೌಚವನ್ನು ನೇರವಾಗಿ ನದಿಗೆ ಹರಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿರುವದನ್ನು ಇಲ್ಲಿ ಸ್ಮರಿಸಬಹುದು. ಕಾವೇರಿ ನಿಸರ್ಗಧಾಮದ ಬೋಟಿಂಗ್ ನಡೆಯುವ ಪ್ರದೇಶದಲ್ಲಿ ಪ್ರವಾಸಿಗರು ಮೂಗುಮುಚ್ಚಿ ಬೋಟಿಂಗ್ ಮಾಡಬೇಕಾದ ಪ್ರಮೇಯ ಸೃಷ್ಟಿಯಾಗಿದೆ.

ಕಾವೇರಿ ನದಿ ಒತ್ತುವರಿಯಾಗುವದರೊಂದಿಗೆ ನದಿ ತಟದಲ್ಲಿ ಅಕ್ರಮವಾಗಿ ಮರಳು ಸಾಗಾಟ ಕೂಡ ಕಂಡುಬಂದಿದೆ. ಮರಳು ಸಾಗಾಟದಿಂದ ನದಿ ತಟದಲ್ಲಿ ಹಾಗೂ ನದಿ ಭಾಗದಲ್ಲಿ ಬೆಳೆದು ನಿಂತಿರುವ ಭಾರೀ ಗಾತ್ರದ ಮರಗಳು ಕೂಡ ತಮ್ಮ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಕೆಲವು ಮರಗಳನ್ನು ಕಡಿದು ಸಾಗಿಸಿರುವ ದೃಶ್ಯ ಸ್ಥಳಕ್ಕೆ ತೆರಳಿದ ಪತ್ರಿಕೆ ಪ್ರತಿನಿಧಿಗೆ ಕಂಡುಬಂದಿದೆ. ಈ ವ್ಯಾಪ್ತಿಯಲ್ಲಿ ನದಿ ಪಾತ್ರದ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿರುವ ದೃಶ್ಯ ಕಂಡುಬಂದಿದ್ದು, ನದಿ ತಟವನ್ನು ತೆರವುಗೊಳಿಸುವಂತೆ ಪ್ರವಾಸಿ ಕೇಂದ್ರದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನದಿ ತಟದಲ್ಲಿ ಕಾಮಗಾರಿ ಸಂದರ್ಭ ಪಂಚಾಯಿತಿಯಿಂದ ಯಾವದೇ ರೀತಿಯ ಅನುಮತಿ ಪಡೆಯದೆ ಅನಧಿಕೃತವಾಗಿ ಕಾಮಗಾರಿ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕುಶಾಲನಗರ ನಗರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ತಕ್ಷಣ ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಯಾವದೇ ರೀತಿಯ ಸ್ಪಂದನ ನೀಡದೆ ಅಕ್ರಮ ಚಟುವಟಿಕೆಗಳು ಮುಂದುವರೆದಿದೆ ಎನ್ನುವ ದೂರು ಸ್ಥಳೀಯರದ್ದಾಗಿದೆ.

ಈ ಬಗ್ಗೆ ಕುಶಾಲನಗರ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವದೇ ರೀತಿಯ ಕಾನೂನು ಕ್ರಮ ಕೈಗೊಳ್ಳದೆ ಮೌನ ವಹಿಸಿರುವದು ಸಂಶಯಕ್ಕೆ ಎಡೆಮಾಡಿದೆ. ಸರಕಾರಿ ಜಾಗ ಅಕ್ರಮವಾಗಿ ಒತ್ತುವರಿ ಮಾಡಿರುವ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ನದಿ ತಟದ ಸಂರಕ್ಷಣೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅಪಾಯ ಕಾದಿದೆ ಎನ್ನುವದು ಸ್ಥಳೀಯರ ದೂರಾಗಿದ್ದು, ಕೂಡಲೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.