*ಗೋಣಿಕೊಪ್ಪಲು, ಸೆ. 23: ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಪ್ರಾರಂಭದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಸೆಲ್ವಿಯವರನ್ನೇ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಸದಸ್ಯರು ಸೂಚಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೆಲ್ವಿ ಈ ಹಿಂದಿನ ಬೆಳವಣಿಗೆಯಿಂದ ನನಗೆ ನೋವು ತಂದಿದೆ. ಅಧ್ಯಕ್ಷ ಸ್ಥಾನ ನನಗೆ ಬೇಡ ಪ್ರಮೋದ್ ಗಣಪತಿ ಅಧ್ಯಕ್ಷರಾಗಲಿ ಎಂದು ಸಭೆಗೆ ತಿಳಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಮೋದ್ ಗಣಪತಿ ತನಗೆ ಅಧ್ಯಕ್ಷ ಸ್ಥಾನದ ಮೇಲೆ ಆಸಕ್ತಿ ಇಲ್ಲ. ತಾವೇ ಅಧ್ಯಕ್ಷರಾಗಿ ಎಂದು ಸೂಚಿಸಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು. ದಸರಾ ಸಮಿತಿ ಅಧ್ಯಕ್ಷರ ಆಯ್ಕೆಯಾಗಿ ಕೆಲವು ತಿಂಗಳುಗಳಿಂದ ರಾಜಕೀಯ ಹಗ್ಗಜಗ್ಗಾಟ ಕಾಂಗ್ಸೆಸ್ ಬಿ.ಜೆ.ಪಿ ನಡುವೆ ನಡೆಯುತ್ತಿತ್ತು. ಕಾಂಗ್ರೆಸ್ ಸದಸ್ಯರು ಪ್ರಮೋದ್ ಗಣಪತಿಯೇ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರೇ ಸೆಲ್ವಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಚಿಸಿರುವದು ಬಿ.ಜೆ.ಪಿ ಬೆಂಬಲಿತ ಸದಸ್ಯರಲ್ಲಿ ಅಚ್ಚರಿ ತಂದಿದೆ.