ಕುಶಾಲನಗರ, ನ. 29: ರಾಜ್ಯದಲ್ಲಿ ಕಾವೇರಿ ನದಿ ಕಲುಷಿಕೆ ತಪ್ಪಿಸಲು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಭರವಸೆ ನೀಡಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ಮಂಡಳಿಗೆ ನೀಡಿದ ಮನವಿ ಸಂದರ್ಭ ಮಾತನಾಡಿದ ಅವರು, ನದಿಗೆ ನೇರವಾಗಿ ಕಲುಷಿಕೆ ತಪ್ಪಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಿಸಿದ ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಪ್ರಾದೇಶಿಕ ಕಚೇರಿಯಿಂದ ಸ್ಥಳೀಯ ಸಂಸ್ಥೆಗಳಿಗೆ ನೋಟೀಸ್ ನೀಡಲು ಸೂಚಿಸಲಾಗಿದೆ ಎಂದರು. ನದಿ ತಟಗಳಲ್ಲಿ ಯಾವದೇ ರೀತಿಯ ನಿಯಮಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸುವದು, ಕಲುಷಿತಗೊಳ್ಳಲು ಕಾರಣಕರ್ತರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದೆಂದು ಲಕ್ಷ್ಮಣ್ ತಿಳಿಸಿದ್ದಾರೆ. ನದಿ ತಟದ ಸಂರಕ್ಷಣೆ ಬಗ್ಗೆ ಜನತೆಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಗಳು ಸಂಘ-ಸಂಸ್ಥೆಗಳ ಮೂಲಕ ನಡೆಸುವ ದರೊಂದಿಗೆ ಮಂಡಳಿಯಿಂದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳ ಲಾಗುವದು ಎಂದು ತಿಳಿಸಿದ್ದಾರೆ.
ಪ್ರವಾಸಿ ಕೇಂದ್ರಗಳಿಗೆ ಪ್ಲಾಸ್ಟಿಕ್ ಕೊಂಡೊಯ್ಯದಂತೆ ಕಟ್ಟುನಿಟ್ಟಿನ ಕ್ರಮ, ಸ್ಥಳೀಯ ಆಡಳಿತಗಳಿಂದ ನಡೆಸುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ ನೀರು ಪಾಲಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಪ್ರವಾಸಿ ಕೇಂದ್ರಗಳಾದ ದುಬಾರೆ ಮತ್ತು ಕಾವೇರಿ ನಿಸರ್ಗಧಾಮ, ಅಬ್ಬಿಫಾಲ್ಸ್ ಮುಂತಾದೆಡೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಪ್ಲಾಸ್ಟಿಕ್ ಬಾಟಲಿಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವದು ಎಂದು ತಿಳಿಸಿದ್ದಾರೆ.
ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮಂಡಳಿಯಿಂದ ರೂ. 5 ಲಕ್ಷ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವದು ಎಂದು ಈ ಸಂದರ್ಭ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತು ಮಂಡಳಿಯ ಸದಸ್ಯರಾದ ಜೆ.ಜಿ. ಕಾವೇರಿಯಪ್ಪ, ಕಾವೇರಿ ನದಿಯ ಕಲುಷಿಕೆಯ ಮತ್ತು ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿ ಒದಗಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಮನವಿ ಸಲ್ಲಿಸಿದರು.