ಭಾಗಮಂಡಲ, ಸೆ. 14: ಕೊಡಗು ಗೌಡ ಸಮಾಜ, ಕೊಡಗು ವಕ್ಕಲಿಗರ ಯಾನೆ ಗೌಡರ ಸೇನೆ, ಕೊಡಗು ಗೌಡ ಯುವ ವೇದಿಕೆ ಭಾಗಮಂಡಲ ನಾಡು ಗೌಡ ಸಮಾಜ ಹಾಗೂ ಸಾರ್ವಜನಿಕರು ಭಾಗಮಂಡಲ ಭಗಂಡೇಶ್ವರ ದೇವಸ್ಥಾನ ಮುಂಭಾಗ ತ್ರಿವೇಣಿ ಸಂಗಮದ ಬಳಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿ, ಕಾವೇರಿ ತೀರ್ಪಿನ ವಿರುದ್ಧ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಲಕಾವೇರಿಯಲ್ಲಿ ನಾಡಿಗೆ ಸುಭಿಕ್ಷೆಯಾಗಲೆಂದು ಮತ್ತು ಉದ್ಭವವಾಗಿರುವ ಸಮಸ್ಯೆಯನ್ನು ಕಾವೇರಿ ಮಾತೆಯೇ ಶಾಂತಿಯುತವಾಗಿ ನಿಲ್ಲಿಸುವಂತೆ ಪ್ರಾರ್ಥಿಸಿ ಬಳಿಕ ಮಾತನಾಡಿದ ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ನಮಗೆ ಕುಡಿಯಲು ನೀರಿಗೆ ಬರ ಇದ್ದರೂ ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿದ ಸುಪ್ರೀಂಕೋರ್ಟ್‍ನ ತೀರ್ಪು ಅವೈಜ್ಞಾನಿಕವಾಗಿದ್ದು, ಇದನ್ನು ಆಡಳಿತ ನಡೆಸುವ ಸಿದ್ದರಾಮಯ್ಯ ಅವರು ತಿರಸ್ಕರಿಸಿ ನೀರನ್ನು ತಡೆ ಹಿಡಿದು ನಾಡಿನ ಹಿತವನ್ನು ಕಾಪಾಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಡಾ. ಮನೋಜ್ ಬೋಪಯ್ಯ ಮಾತನಾಡಿ, ಕರ್ನಾಟಕದ ನ್ಯಾಯವಾದಿ ನಾರಿಮನ್ ಅವರು ರಾಜ್ಯದ ವಸ್ತು ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ವಿಫಲವಾಗಿರುವದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ವಿಫಲ ವಾಗಿರುವದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.

ಕೊಡಗು ವಕ್ಕಲಿಗ ಯಾನೆ ಗೌಡರ ಸೇನೆಯ ಜಿಲ್ಲಾ ಸಂಚಾಲಕ ಕುಯ್ಯಮುಡಿ ಮನೋಜ್ ಮಾತನಾಡಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕ್ರಮ ಖಂಡನೀಯವೆಂದರು. ಕೋಡಿ ಪೊನ್ನಪ್ಪ ಅವರು ಮಾತನಾಡಿ, ಕೊಡಗಿನ ಕಾವೇರಿಯ ನೆಲ ಬರಡಾಗಿದ್ದು, ಇದರ ಫಲವತ್ತತೆಯಿಂದ ಶ್ರೀಮಂತರಾದ ಜನ, ನಾಯಕರಾಗುತ್ತಿದ್ದು, ಕಾವೇರಿ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಕುದುಕುಳಿ ಭರತ್ ಮಾತನಾಡಿ, ಸಿದ್ದರಾಮಯ್ಯ ಸರಕಾರ ಜನವಿರೋಧಿ ಸರಕಾರವಾಗಿದೆ ಎಂದು ಆರೋಪಿಸಿದರು. ಕೊಡಗು ಯುವ ವೇದಿಕೆಯ ರಿಷಿತ್ ಮಾದಯ್ಯ ಮಾತನಾಡಿ, ಕಾವೇರಿ ನಾಡಿನ ಜನರಿಗೆ ಕುಡಿಯಲು ನೀರಿಲ್ಲ. ಈ ಭಾಗದ ಕಷ್ಟವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕುಯ್ಯಮುಡಿ ಪೂರ್ಣಯ್ಯ, ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಸೂರ್ತಲೆ ಕಾಶಿ, ಗೌಡ ಯುವ ವೇದಿಕೆ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್, ಕುಯ್ಯಮುಡಿ ಲವ, ರಂಜಿತ್, ಕುಂಞ್ಞಳಿ ಸಂತೋಷ್, ತಾರಾಮಣಿ, ಊರಪಂಜೆ ತೀರ್ಥರಾಮ, ಪರ್ಚನ ಸತೀಶ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜ ರೈ, ಪುರುಷೋತ್ತಮ, ಭಾಸ್ಕರ, ವಾಹನ ಮಾಲೀಕರು ಚಾಲಕರ ಸಂಘದ ಅಧ್ಯಕ್ಷ ಅನಿಲ್, ದೇವಂಗೋಡಿ ದುಷ್ಯಂತ್, ಟೋನಿ, ಕೋಡಿ ಮೋಟಯ್ಯ ಹಾಗೂ ಯುವ ವೇದಿಕೆಯ ಕಾರ್ಯಕರ್ತರು, ಭಾಗಮಂಡಲ ಮತ್ತು ಚೇರಂಬಾಣೆ ಭಾಗದ ನಾಗರಿಕರು ಭಾಗವಹಿಸಿದ್ದರು.