ಮಡಿಕೇರಿ, ಆ. 13: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಚನೆಯಾಗಿರುವ ವಿದ್ಯಾರ್ಥಿಗಳ ಕನ್ನಡ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪರ ಚಟುವಟಿಕೆಗಳ ಮೂಲಕ ಕನ್ನಡ ಸಾಹಿತ್ಯಾಭಿರುಚಿ ಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಅಗತ್ಯವಿದ್ದು, ಕನ್ನಡ ಸಂಘ ಈ ಕಾರ್ಯವನ್ನು ಮಾಡಲಿ ಎಂದು ಕರೆ ನೀಡಿದರು.
ಕನ್ನಡ ಕಮ್ಮಟ ಸೇರಿದಂತೆ ಕನ್ನಡ ಪರವಾದ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಕಾಲೇಜು ವಿದ್ಯಾಭ್ಯಾಸವನ್ನು ಕೇವಲ ಪಠ್ಯ ಚಟುವಟಿಕೆಗಳಿಗಷ್ಟೇ ಸೀಮಿತಗೊಳಿಸದೆ ಈ ನಾಡಿನ ಋಣ ತೀರಿಸಲು ಕನ್ನಡ ಭಾಷೆಯ ಅಭಿಮಾನದೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಲೋಕೇಶ್ ಸಾಗರ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ವಿದ್ಯಾರ್ಥಿಗಳು ಮತ್ತಷ್ಟು ಕ್ರೀಯಾಶೀಲ ರಾಗಬೇಕು ಎಂದು ಕರೆ ನೀಡಿದರು. ಕಾಲೇಜಿನಲ್ಲಿ ನಡೆಯುವ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಹೆಚ್ಚು ಸಕ್ರೀಯರಾಗಬೇಕೆಂದು ಸಲಹೆ ನೀಡಿದರು.
ಕನ್ನಡ ಸಂಘದ ಪದಾಧಿಕಾರಿ ಗಳಿಗೆ ಇದೇ ಸಂದರ್ಭ ಪ್ರತಿಜ್ಞಾವಿಧಿ ಬೋಧಿಸಲಾಯಿತು ಮತ್ತು ವಿದ್ಯಾರ್ಥಿಗಳು ಹೊರತಂದಿರುವ ಅಕ್ಷರ ಭಿತ್ತಿ ಪತ್ರಿಕೆಯನ್ನು ಲೋಕೇಶ್ ಸಾಗರ್ ಬಿಡುಗಡೆ ಮಾಡಿದರು.
ಸಂಘದ ಅಧ್ಯಕ್ಷ ಸುಮನ್ ಬಿ.ಟಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್, ಕಾರ್ಯದರ್ಶಿಗಳಾದ ಲಾವಣ್ಯ ಬಿ.ಆರ್, ಶರ್ಮಾ ಎ.ಟಿ, ಸಮೀಮ ಭಾನು ಕೆ.ಯು, ಜುಬೈರ್ ಎಂ.ಎಂ., ಭಿತ್ತಿ ಪತ್ರಿಕೆ ಸಂಪಾದಕಿ ವತ್ಸಲ ಎಸ್.ಆರ್, ಉಪ ಸಂಪಾದಕಿ ಆರತಿ ಎಂ.ಎಸ್, ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ, ಉಜಿರೆಯ ಧರ್ಮಸ್ಥಳ ಮಂಜುನಾಥ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಎ. ಸಂಪತ್ ಕುಮಾರ್ ಮತ್ತಿತರ ಪ್ರಮುಖರು ಹಾಜರಿದ್ದರು.