ಮೂರ್ನಾಡು, ಡಿ. 30: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳ್ಳದೆ ಇರುವದರಿಂದ ಗ್ರಾಮ ಪಂಚಾಯಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಿಡಿಓ ಲೋಕೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದಲ್ಲಿ ಅನೇಕ ಕಾಮಗಾರಿಗಳು ಸಂಪೂರ್ಣ ಗೊಂಡಿದ್ದು, ಅನುದಾನಗಳು ಬಿಡುಗಡೆಗೊಂಡಿಲ್ಲ. ಕಾಮಗಾರಿಗಳ ಯೋಜನೆ ಅನುಷ್ಠಾನಗೊಂಡು ಅನೇಕ ಭಾಗಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿದೆ.

ಇದುವರೆಗೂ ಕಾಮಗಾರಿಗಳ ಅನುದಾನ ದೊರೆತಿಲ್ಲ. ಮುಂದೆ ನಿರ್ವಹಿಸ ಬೇಕಾಗಿರುವ ಕಾಮಗಾರಿಗಳನ್ನು ಅನುದಾನ ಬಿಡುಗಡೆಗೊಳ್ಳದ ಹಿನ್ನೆಲೆ ಗುತ್ತಿಗೆದಾರರು ನಿರ್ವಹಿಸುತ್ತಿಲ್ಲ. ಪೂರ್ಣಗೊಂಡ ಕಾಮಗಾರಿಗಳಿಗೆ ಅನುದಾನ ದೊರೆತಿಲ್ಲ.

ಮುಂದಿನ ಕಾಮಗಾರಿಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪಟ್ಟಣದ ಶೌಚಾಲಯ ಬಳಿ ಕಸದ ರಾಶಿಗಳು ತುಂಬಿಕೊಂಡಿದೆ. ಅನುದಾನ ಬಿಡುಗಡೆಗೊಳ್ಳದ ಹಿನ್ನೆಲೆ ಸ್ವಚ್ಛತಾ ಕಾರ್ಯವನ್ನು ಕೂಡ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಗೊಂಡ ಕಾಮಗಾರಿಗಳು ಶೇ. 60 ರಷ್ಟು ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳು ನಿರ್ವಹಿಸಲು ಸಾಧ್ಯವಾಗದೆ ಉಳಿದಿದೆ. ಪಂಚಾಯಿತಿ ವತಿಯಿಂದ ಯಾವದೇ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಸದಸ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅದಕ್ಕೆ ಉತ್ತರ ನೀಡಬೇಕಾಗಿದೆ ಎಂದು ಸದಸ್ಯ ಎಂ.ಎಂ. ಸಾದಿಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಂಪೂರ್ಣಗೊಂಡ ಕಾಮಗಾರಿಗಳ ಅನುದಾನವನ್ನು ಶೀಘ್ರದಲ್ಲಿ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿದರು.

ಜಿಪಿಎಸ್ ಮುಖಾಂತರ ಕಾಮಗಾರಿಗಳನ್ನು ಮೂರು ಹಂತಗಳಲ್ಲಿ ಅಪ್‍ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ನೂತನವಾಗಿ ಜಿಪಿಎಸ್ ಮಾಡುವ ವ್ಯವಸ್ಥೆ ಜಾರಿಯಾಗಿದೆ. ಅದರಿಂದ ಸಂಪೂರ್ಣಗೊಂಡ ಕಾಮಗಾರಿಗಳನ್ನು ಮತ್ತೆ ಅಪ್‍ಲೋಡ್ ಮಾಡಬೇಕಾಗಿದೆ.

ಇದರಿಂದ ಅನುದಾನ ಬಿಡುಗಡೆ ನಿಧಾನವಾಗುತ್ತಿದೆ ಹಾಗೂ ಕ್ರಿಯಾ ಯೋಜನೆ ತಡವಾಗಿ ಮಾಡಿದ್ದರಿಂದ ಅನುದಾನ ಬಿಡುಗಡೆ ನಿಧಾನವಾಗಿ ಸಾಗುತ್ತಿದೆ ಎಂದು ಪಿಡಿಓ ಲೋಕೇಶ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮಸ್ಥರು ನೀಡಿದ ಅರ್ಜಿಗಳನ್ನು ಓದಿ ಅವುಗಳ ಕುರಿತು ನಿರ್ಣಯವನ್ನು ಕೈಗೊಳ್ಳಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ ಹಾಜರಿದ್ದರು.