ಸೋಮವಾರಪೇಟೆ, ಅ. 5: ಹವಾಮಾನ ವೈಪರೀತ್ಯ, ಅಧಿಕ ಕೃಷಿ ವೆಚ್ಚ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಫಿ ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಬೆಳೆಗಾರರ ಹಿತ ಕಾಪಾಡಲು ಅನುಕೂಲವಾಗುವಂತೆ ಪ್ರತಿ ಕಾಫಿ ಮಂಡಳಿ ಕಚೇರಿಗಳಿಗೆ ತಲಾ ರೂ. 5 ಕೋಟಿ ಅನುದಾನ ನೀಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕಾಫಿ ಬೆಳೆಗಾರರಿಗೆ ಸಹಾಯಧನ ತಲಪದೇ ಇರುವದರಿಂದ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಕಚೇರಿಗಳಿಗೆ ತಲಾ ರೂ. 5 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೀಗ ಕಾಫಿ ಮಂಡಳಿ ವಿತರಿಸುವ ಕಾಫಿ ಬೀಜದ ದರವನ್ನು ಏಕಾಏಕಿ ರೂ. 500 ಏರಿಸಿರುವದನ್ನು ಕೈಬಿಟ್ಟು, ರೂ. 200ಕ್ಕೆ ಇಳಿಸಬೇಕು. ಕಾಫಿ ಕಾಯ್ದೆ 2016ರ ಸಾಧಕ-ಬಾಧಕಗಳನ್ನು ಬೆಳೆಗಾರರಿಗೆ ತಿಳಿಸಿಕೊಡಲು ಕಾಫಿ ಮಂಡಳಿಯವರು ಬೆಳೆಗಾರರು ಹಾಗೂ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಲು ವೇದಿಕೆ ಸಿದ್ಧಪಡಿಸಬೇಕು ಎಂದು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಉಪಾಧ್ಯಕ್ಷೆ ಜಲಾ ಹೂವಯ್ಯ, ಕಾರ್ಯದರ್ಶಿ ಸುದೀಪ್ ಸೇರಿದಂತೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.