ಕಾಫಿ ಸೀಡ್‍ಗೆ ರೂ. 500...!!!

ಚೆಟ್ಟಳ್ಳಿ, ಡಿ. 1: ಕಾಫಿ ಮಂಡಳಿಯು ಆಯ್ದ ತಳಿಯನ್ನು ಕಾಫಿ ಬೆಳೆಗಾರನಿಗೆ ಕೆ.ಜಿ. ಒಂದಕ್ಕೆ ಹಲವು ವರ್ಷಗಳಿಂದ ರೂ. 200 ಕ್ಕೆ ಮಾರಾಟ ಮಾಡುತ್ತಿದ್ದು, ಈ ವರ್ಷ ಏಕಾಏಕಿ ರೂ. 500 ಕ್ಕೆ ಮಾರಾಟ ಮಾಡಲು ನಿರ್ಧರಿಸಿದ ಕ್ರಮದಿಂದ ಬೆಳೆಗಾರರು ಆತಂಕ ಗೊಂಡಿದ್ದಾರೆ. ಕಾಫಿ ಮಂಡಳಿಯ ಈ ಕರಾಮತ್ತಿನ ಬಗ್ಗೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಳ್ಳುತಿದ್ದಾರೆ.

ಭಾರತದ ಕಾಫಿ ಮಂಡಳಿ ಚಿಕ್ಕಮಂಗಳೂರಿನ ಬಾಳೆಹೊನ್ನೂರು, ಕೊಡಗಿನ ಚೆಟ್ಟಳ್ಳಿ, ಕೇರಳದ ಕಲ್ಪೆಟ್ಟ, ತಮಿಳು ನಾಡಿನ ತಾಂಡಿಕುಡಿ, ಆಂಧ್ರಪ್ರದೇಶದಲ್ಲಿ ಹಾಗೂ ಹಲವೆಡೆ ತಮ್ಮದೇ ಆದ ಕಾಫಿ ಸಂಶೋಧನಾ ಕೇಂದ್ರ ಹೊಂದಿದ್ದು, ಬೀಜೋದ್ಪಾದನೆಯ ಕಾಫಿ ಬೀಜಗಳನ್ನು ಸಂಶೋಧಿಸಿ ಅವುಗಳನ್ನು ಬೆಳೆಗಾರರಿಗೆ ವಿತರಿಸಿ ಉತ್ತಮ ತಳಿಯ ಕಾಫಿ ಬೆಳೆಯನ್ನು ಬೆಳೆಸಲು ಪ್ರೇರೇಪಿಸುವದು ಉದ್ದೇಶವಾಗಿದೆ.

ಕಾಫಿ ಬೆಳೆಗಾರನಿಗೆ ಕಾಫಿ ಮಂಡಳಿಯಿಂದ ಬೀಜ ಬೇಕಾದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಕೊನೆಯ ತಿಂಗಳೊಳಗೆ ಬೇಡಿಕೆಯಷ್ಟು ಹತ್ತಿರದ ಸಂಪರ್ಕಾಧಿಕಾರಿಯವರ (ಜೆಎಲ್‍ಓ) ಕಚೇರಿಗೆ ಅರ್ಜಿ ಸಲ್ಲಿಸಿ ಮಂಡಳಿಯು ನಮೂದಿಸಿದ ಹಣವನ್ನು ಪಾವತಿಸಿ ರಸೀತಿ ಪಡೆಯಬೇಕು. ಮಂಡಳಿ ಜನವರಿಯಿಂದ ಫೆಬ್ರವರಿವರೆಗೆ ಸಂಸ್ಕರಿಸಿದ ಕಾಫಿ ಬೀಜಗಳನ್ನು ಬೆಳೆಗಾರರಿಗೆ ವಿತರಿಸುವದು ಕ್ರಮ.

ಹಲವು ವರ್ಷಗಳಿಂದ ಅರೇಬಿಕಾ ಹಾಗೂ ರೋಬಸ್ಟಾ ಬೀಜವನ್ನು ಕೆ.ಜಿ.ಗೆ ರೂ. 200 ರಲ್ಲಿ ನೀಡುತಿತ್ತು. ಕಾಫಿ ಬೆಳೆಗಾರರು ಈ ವರ್ಷ ಕಾಫಿ ಮಂಡಳಿಯಿಂದ ಬೀಜಕ್ಕಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಕೆ.ಜಿ.ಗೆ ರೂ. 500 ಅನ್ನು ಪಾವತಿಸುವಂತೆ ತಿಳಿಸಿದ್ದು, ವಿಧಿಯಿಲ್ಲದೆ ಬೆಳೆಗಾರ ಕೆ.ಜಿ.ಗೆ ರೂ. 500 ಅನ್ನು ಪಾವತಿಸಬೇಕಾಗಿದೆ.

ಇದಕ್ಕೆ ಸಂಬಂಧಪಟ್ಟಂತೆ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಡಿಡಿಆರ್ ಹೇಳುವಂತೆ ಪ್ರಧಾನ ಕಾಫಿ ಮಂಡಳಿಯ ಕಚೇರಿಯಿಂದ ಆದೇಶವಾಗಿದ್ದು, ಎಷ್ಟೋ ವರ್ಷಗಳಿಂದ ಹಳೆಯ ಬೆಲೆಯಲ್ಲೇ ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಿಸಿದ ಕಾಫಿ ಬೀಜಗಳಿಗೆ ತಗಲಲಿರುವ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಕಾಫಿ ಮಂಡಳಿ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದರು.

ಕಾಫಿ ಬೀಜಗಳ ಬೆಲೆ ಮಾತ್ರವಲ್ಲ ಕಾಫಿ ಮಂಡಳಿಯು ಬೆಳೆಗಾರರಿಗೆ ವಿತರಿಸುವ ಪ್ರತಿಯೊಂದಕ್ಕೂ ಬೆಲೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಇಲಾಖಾ ತಜ್ಞರು ಹಿಂದೆ ಬೆಳೆಗಾರನ ಕಾಫಿ ತೋಟವನ್ನು ಉಚಿತವಾಗಿ ಸಂದರ್ಶಿಸುತಿದ್ದರು. ಈಗ ಒಂದೊಂದು ತೋಟಗಳ ಸಂದರ್ಶನಕ್ಕೂ ಇಂತಿಷ್ಟು ಹಣವನ್ನು ಮಂಡಳಿ ನಿಗದಿಪಡಿಸಿದೆ. ಕಾಫಿ ಬೀಜಗಳಿಗೆ ಏಕಾಏಕಿ ರೂ. 200 ಇದ್ದುದನ್ನು ರೂ. 500ಕ್ಕೆ ಏರಿಸಿದ್ದು ಸರಿಯಲ್ಲ. ದುಪ್ಪಟಿಗಿಂತ ಹೆಚ್ಚಿಗೆ ಏಕಾಏಕಿ ಏರಿಸಿರುವದು ಸರಿಯಲ್ಲವೆಂದು ಹಲವು ಕಾಫಿ ಬೆಳೆಗಾರರು ದೂರಿದ್ದಾರೆ.

ಖಾಸಗಿಯವರು ಹಾಗೂ ಕಂಪೆನಿಯವರು ಸಂಸ್ಕರಿಸಿದ ಬೀಜಗಳನ್ನು ತಯಾರಿಸಿ ಹೆಚ್ಚಿಗೆ ಮಾರಾಟ ಮಾಡಲಾಗುತ್ತಿದ್ದು, ಮಧ್ಯಮ ಬೆಳೆಗಾರರು ಕಡಿಮೆ ಬೆಲೆಗೆ ಕಾಫಿ ಮಂಡಳಿಯು ನೀಡುತಿದ್ದ ಸಂಸ್ಕರಿಸಿದ ಬೀಜಗಳನ್ನೇ ತಂದು ಕಾಫಿ ಗಿಡಗಳನ್ನು ಬೆಳೆಸುತ್ತಿದ್ದರು. ಆದರೆ ಕಾಫಿ ಮಂಡಳಿಯು ಬೆಲೆ ಏರಿಸಿದರಿಂದ ತೀವ್ರ ತೊಂದರೆ ಯಾದಂತಾಗಿದೆ. ಈಗಿನ ಮಾರುಕಟ್ಟೆಯ ಬೆಲೆಯಲ್ಲಿ ಕಾಫಿ ಬೀಜಕ್ಕೆ ಕೆ.ಜಿ.ಗೆ ರೂ. 100 ರಿಂದ 150 ಆಗಲಿದ್ದು ಸಂಸ್ಕರಿಸಿದ ಖರ್ಚು ವೆಚ್ಚ ಸೇರಿ ಕೆ.ಜಿ.ಗೆ ರೂ. 300 ರಿಂದ 350 ಏರಿಸಬಹುದಿತ್ತು. ಆದರೆ ಮಂಡಳಿ ಕೆ.ಜಿ.ಗೆ ರೂ. 500 ಏರಿಸಿದ್ದು ಕಾಫಿಯ ಬೆಲೆ ಚೀಲ (50 ಕೆ.ಜಿ.) ಒಂದಕ್ಕೆ ರೂ. 25000 ತಗಲಿದಂತಾಯಿತು. ಕಾಫಿ ಮಂಡಳಿಯ ಈ ಕ್ರಮ ಸರಿಯಾದುದಲ್ಲ. ಈ ವರ್ಷ ಮಳೆಯಿಲ್ಲದೆ ಫಸಲು ನಷ್ಟದಲ್ಲಿ ಹೆಣಗಾಡುತ್ತಿರುವ ಬೆಳೆಗಾರನಿಗೆ ಬರೆಯ ಮೇಲೆ ಬರೆ ಎಳೆದಂತಾಗಿದೆ. - ಕರುಣ್ ಕಾಳಯ್ಯ