ಸೋಮವಾರಪೇಟೆ, ಜೂ. 15: ಕಾಫಿ ಬೆಳೆಗಾರರು ಬ್ಯಾಂಕ್ಗಳಿಂದ ಪಡೆದಂತಹ ಸಾಲಕ್ಕೆ ಸಹಾಯಧನ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಇಲ್ಲಿನ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಹೇಳಿದರು.
ಸಿ.ಕೆ. ಸುಬ್ಬಯ್ಯ ರಸ್ತೆಯ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಾಗಲೇ ಬ್ಯಾಂಕಿನಲ್ಲಿ ಕಾಫಿ ಬೆಳೆಗಾರರು ಪಡೆದಿರುವ ಸಾಲದ ಮೆಲಿನ ಸಹಾಯಧನದ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಅವರು ಈ ಮಾಹಿತಿ ನೀಡಿದರು.
ಕಾಫಿ ತೋಟಗಳ ಕೆಲಸ ಕಾರ್ಯಗಳಿಗೆ ಬಳಸುವ ಎಲ್ಲಾ ಬಗೆಯ ಯಂತ್ರೋಪಕರಣಗಳಿಗೆ, ಗೋದಾಮು, ಪಲ್ಪರ್ ಘಟಕ, ಕಾಫಿ ಒಣಗಿಸುವ ಕಣ, ಕಾಫಿ ತೋಟಗಳಲ್ಲಿ ನೂತನ ಕಾಫಿ ತೋಟ ಹಾಗೂ ಬೋರರ್ ಹಾವಳಿಗೆ ಸಿಲುಕಿ ನಾಶವಾದ ತೋಟಗಳಲ್ಲಿ ಮರು ಕಾಫಿ ತೋಟ ಮಾಡಲು ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತಿದ್ದು, ಎಲ್ಲಾ ಬೆಳಗಾರರು ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದರು.
ಅರೇಬಿಕಾ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಎಲೆ ಚುಕ್ಕಿ ರೋಗವನ್ನು ಹತೋಟಿಯಲ್ಲಿಡಲು ಪ್ರತಿ ವರ್ಷ ಮೇ ಮತ್ತು ಸೆಪ್ಟಂಬರ್ ತಿಂಗಳ ಮಧ್ಯಭಾಗದಲ್ಲಿ ಕಾಫಿ ಗಿಡಗಳಿಗೆ ಶೇ. 0.5 ಬೋರ್ಡೊ ದ್ರಾವಣವನ್ನು ಸಿಂಪಡಿಸಿದಲ್ಲಿ ಕಾಯಿಲೆಯನ್ನು ಹತೋಟಿಗೆ ತರಬಹುದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಂದಾಯ ಇಲಾಖೆ ನೀಡುತ್ತಿರುವ ಆರ್ಟಿಸಿಯಲ್ಲಿ ಯಾವದೇ ಬೆಳೆ ನಮೂದಾಗದೆ ಇರುವದರಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಕಷ್ಟವಾಗುತ್ತಿರುವದಾಗಿ ಬೆಳೆಗಾರರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಮಸ್ಯೆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅಲ್ಲದೆ, ಕಾಫಿ ಬೆಳೆಗಾರರು ಕಾಫಿ ಮಂಡಳಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿಕೊಂಡು ಕಾಫಿ ಬೆಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಮೋಹನ್ ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಎಸ್.ಪಿ. ಪ್ರಕಾಶ್, ಉಪಾಧ್ಯಕ್ಷರಾದ ಬಿ.ಎಂ. ಲವ, ಕೆ.ಪಿ. ಬಸಪ್ಪ, ಕಾಫಿ ಮಂಡಳಿ ಅಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.