ಸೋಮವಾರಪೇಟೆ, ನ. 29: ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರಕಾರಕ್ಕೆ ತಲಪಿಸುವಲ್ಲಿ ಸಂಸದರು ನಿರಾಸಕ್ತಿ ತಾಳುತ್ತಿದ್ದು, ಹೀಗೆಯೇ ಮುಂದುವರೆದಲ್ಲಿ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನಕ್ಕೆ ಒತ್ತಾಯಿಸಬೇಕಾಗುತ್ತದೆ ಎಂದು ಕಾಫಿ ಬೆಳೆಗಾರರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದ್ದಾರೆ.

ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಸಮೀಪದ ತೋಳೂರುಶೆಟ್ಟಳಿಯ ಸಹಕಾರ ಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಭೆಯಲ್ಲಿ ಬಹುತೇಕ ಬೆಳೆಗಾರರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲೆಯಾದ್ಯಂತ ಕಾಫಿ ಬೆಳೆಗಾರರು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸÀಕಾರಾತ್ಮಕವಾಗಿ ಸ್ಪಂದಿಸಿರುವದಿಲ್ಲ. ಅಲ್ಲದೆ ಸಮಸ್ಯೆಗಳ ಪರಿಹಾರಕ್ಕೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಇದೇ ಸಂದರ್ಭ ಕಾಫಿ ಕಾಯ್ದೆ 2016ರ ಕುರಿತು ಸಭೆಯಲ್ಲಿ ಚರ್ಚಿಸಲಾಗಿ ಬೆಳೆಗಾರರ ಹಿತಾಸÀಕ್ತಿ ಯನ್ನು ಗಮನದಲ್ಲಿರಿಸಿಕೊಂಡು ಈ ಕಾಯ್ದೆಯ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು. ಇತ್ತೀಚೆಗೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಒತ್ತುವರಿ ತೆರವು ಬಗ್ಗೆ ರೈತರಿಗೆ ಉಂಟಾಗುತ್ತಿರುವ ಅನ್ಯಾಯದ ಕುರಿತು ಸವಿಸ್ತಾರವಾದ ವರದಿ ನೀಡಲಾಗಿತ್ತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಕೆಲವೆಡೆ ಒತ್ತುವರಿ ತೆರವು ಪ್ರಕರಣಗಳು ನಡೆಯುತ್ತಿವೆ ಎಂದು ಬೆಳೆಗಾರರು ಸಭೆಗೆ ತಿಳಿಸಿದರು.

ಕಾಫಿ ಬೆಳೆಗಾರರು ಮಾಡಿರುವ ಸಾಲ ಮತ್ತು ಸಾಲದ ಬಡ್ಡಿ ಮೀತಿ ಮೀರಿದ್ದು, ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಗರಿಷ್ಠ ಬೆಂಬಲ ಬೆಲೆ ನಿಗದಿ ಮಾಡ ಬೇಕು. ತಾಲೂಕಿನ ಅಬ್ಬೂರುಕಟ್ಟೆ, ಆಡಿನಾಡೂರು, ಶನಿವಾರಸಂತೆ ಸುತ್ತಮುತ್ತ ರೈತರ ಬೆಳೆ ನಾಶ ಮತ್ತು ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂಬ ನಿರ್ಣಯ ಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್‍ನ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಸಂಘದ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷರುಗಳಾದ ಲವ, ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.