ಮಡಿಕೇರಿ, ಸೆ. 20: ಕಾಫಿಯ ಬಗ್ಗೆ ಯಾವದೇ ಕಾನೂನು ತಿದ್ದುಪಡಿ ಆದರೂ ಅದರಿಂದ ಬೆಳೆಗಾರರ ಶೋಷಣೆಯಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್ ಅವರು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಬೆಳೆಗಾರರು, ಬೆಳೆಗಾರ ಸಂಘಟನೆಗಳು ಜಾಗೃತರಾಗಬೇಕಿದೆ ಎಂದು ಕರೆ ನೀಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು ಕಾಫಿಗೆ ಮುಕ್ತ ಮಾರುಕಟ್ಟೆ ಅವಕಾಶ ದೊರೆತ ಬಳಿಕ ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ ಹೊರತು ಪಡಿಸಿ ಈ ಉದ್ಯಮಕ್ಕೆ ಅಂತಹ ಸಮಸ್ಯೆ ಎದುರಾಗಿಲ್ಲ. ದೇಶದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಕೊಡಗು ಸೇರಿದಂತೆ ಯಾವದೇ ಭಾಗದ ಬೆಳೆಗಾರರು ಕಾನೂನು ತಿದ್ದುಪಡಿಯ ಬೇಡಿಕೆ ಮುಂದಿಟ್ಟಿಲ್ಲ. ಈ ಸನ್ನಿವೇಶದಲ್ಲಿ ಕಾನೂನು ತಿದ್ದುಪಡಿಯ ಔಚಿತ್ಯ ಏನಿದೆ ಎಂಬದು ಪ್ರಶ್ನಾರ್ಹವಾಗಿದೆ. ಪ್ರಸ್ತುತದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸ್ಥಳೀಯ ಹಲ್ಲರ್‍ಗಳು ಹಾಗೂ ದೊಡ್ಡ ಖರೀದಿದಾರರ ನಡುವಿನ ಪೈಪೋಟಿಯಿಂದಾಗಿ ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನಕರವಾದ ಬೆಲೆ ಸಿಗುತ್ತದೆ. ಕಾನೂನು ತಿದ್ದುಪಡಿಯಿಂದ ಅಧಿಕಾರಿಗಳಿಂದ ಬೆಳೆಗಾರರು ಶೋಷಣೆಗೆ ಒಳಗಾಗುವದು ಖಚಿತ ಎಂದಿರುವ ಪ್ರದೀಪ್ ಹಲವು ಕಾರಣಗಳ ನೆಪದೊಂದಿಗೆ ಬೆಳೆಗಾರರು ಕಿರುಕುಳ ಎದುರಿಸ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ದೇಶದ ಕಾಫಿಯ ಗುಣಮಟ್ಟ ಉತ್ತಮವಾಗಿದೆ ಹೊಸ ಕಾಯ್ದೆಯಂತೆ ಅಧಿಕಾರಿಗಳು ಒಂದು ಗುಣಮಟ್ಟ ಪರಿಶೀಲನೆ ಮತ್ತಿತರ ಕಾರಣ ಹೇಳಿ ಹಲ್ಲರ್‍ಗಳಿಗೆ ಕಿರುಕುಳ ನೀಡಿದಲ್ಲಿ ಇದು ಬೆಳೆಗಾರನ ಮೇಲೆ ಹೊಡೆತ ಬೀಳುತ್ತದೆ. ಪ್ರಸ್ತುತ ಸ್ಥಳೀಯ ಹಲ್ಲರ್‍ಗಳಿಂದಾಗಿ ದೊಡ್ಡ ಖರೀದಿಗಾರರು ಸ್ಪರ್ಧಾತ್ಮಕ ದರದಲ್ಲಿ ಕಾಫಿ ಖರೀದಿಸುತ್ತಿದ್ದಾರೆ. ಇಲ್ಲದಿದ್ದಲ್ಲಿ ಇದರ ಹಿಡಿತವನ್ನು ದೊಡ್ಡ ದೊಡ್ಡ ಕಂಪೆನಿಗಳೇ ತಮ್ಮ ಕಪಿಮುಷ್ಟಿಯಲ್ಲಿಡುವ ಸಾಧ್ಯತೆ ಇದೆ. ಇದರೊಂದಿಗೆ ಹೊಸ ಕಾನೂನಿನಂತೆ ಅಧಿಕಾರಿಗಳು ಬೆಳೆಗಾರರ ತೋಟಗಳಿಗೆ ತೆರಳಿ ಪರಿಶೀಲಿಸುವ ಅಧಿಕಾರದಿಂದಾಗಿಯೂ ಸಣ್ಣ ಹಾಗೂ ಮಧ್ಯಮ ಬೆಳೆಗಾರರು ಸಮಸ್ಯೆ ಎದುರಿಸಬೇಕಾದೀತು.

ಅಲ್ಲದೆ ಬೆಳೆಗಾರರನ್ನು ನೋಂದಣಿ ಮಾಡಿಸುವ ಕಾನೂನಿನಿಂದಲೂ ಸಮಸ್ಯೆ ತಲೆದೋರಲಿದೆ. ಜಿಲ್ಲೆಯಲ್ಲಿ ಇಲ್ಲಿನ ಟೆನ್ಯೂರ್ ಸಮಸ್ಯೆಯಿಂದಾಗಿ ಜಾಗದ ದಾಖಲೆಗಳು ವ್ಯವಸ್ಥಿತವಾಗಿಲ್ಲ. ದಾಖಲಾತಿ ಸರಿ ಇಲ್ಲ ಎಂಬ ಕಾರಣದಿಂದಲೂ ಸಮಸ್ಯೆ ಉದ್ಭವವಾಗುವ ಸಂಭವವಿದೆ ಎಂದು ಈ ಹಿಂದೆ ಫಾರ್ಮ್ ನಂ 53ರಂತೆ ಜನರು ಸಲ್ಲಿಸಿರುವ ಅರ್ಜಿ, ಅಕ್ರಮ - ಸಕ್ರಮ, ಪಟ್ಟೆದಾರರ ಹೆಸರು, ಮಾಜಿ ಸೈನಿಕರ ಜಾಗದ ವಿಚಾರ ಈ ರೀತಿಯಾಗಿ ಎಲ್ಲವೂ ಸ್ಥಳೀಯ ಬೆಳೆಗಾರರಿಗೆ ಸಮಸ್ಯೆ ದುಪ್ಪಟ್ಟಾಗಲಿದೆ. ಈ ನಿಟ್ಟಿನಲ್ಲಿ ಗಂಭೀರ ಚರ್ಚೆಯಾಗಬೇಕಿದೆ. ಎಲ್ಲೋ ಕೆಲವೆಡೆ ಗುಣಮಟ್ಟ ಸರಿ ಇಲ್ಲ ಎಂದು ಇಡೀ ಬೆಳೆಗಾರರಿಗೆ ಕಿರುಕುಳ ಆಗಬಾರದು. ಹೊಸ ಕಾನೂನು ಜಾರಿಯಾದಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಬರುವ ಮುಂಚೆ ಇದ್ದಂತೆ ಹತ್ತು ಹಲವಾರು ಸಮಸ್ಯೆಗಳು ಎದುರಾಗಲಿದೆ. ನಮ್ಮ ಹಿರಿಯರು ಅನುಭವಿಸಿದ್ದ ಪರಿಸ್ಥಿತಿ ಈಗಲೂ ಜನಮಾನಸದಲ್ಲಿದೆ. ಈ ಬಗ್ಗೆ ಬೆಳೆಗಾರರು, ಬೆಳೆಗಾರ ಸಂಘಟನೆಗಳು ಜಾಗೃತವಾಗಿ ಸರಕಾರದ ಗಮನ ಸೆಳೆಯು ವಂತಾಗಬೇಕು ಎಂದು ಸ್ವತಹ ಕಾಫಿ ಬೆಳೆಗಾರರೂ ಆಗಿರುವ ಬಿ.ಟಿ. ಪ್ರದೀಪ್ ಸಲಹೆ ಮಾಡಿದ್ದಾರೆ.