ಶನಿವಾರಸಂತೆ, ಡಿ. 10: ಕಾಫಿ ಪಲ್ಪಿಂಗ್‍ನಲ್ಲಿ ಹೊರಬರುವ ತ್ಯಾಜ್ಯದ ನೀರು ಸಂಸ್ಕರಿಸುವ ಹೊಸ ವಿಧಾನ, ಉತ್ಪನ್ನ ಪರಿಚಯಿಸುವ ಪರವಾನಗಿಯನ್ನು ಮೈಸೂರಿನ ಅಥರ್ವ ಪ್ಲಾಂಟೇಷನ್ ಸಲ್ಯೂಷನ್ಸ್ ಪಡೆದಿದೆ ಎಂದು ಮೈಸೂರಿನ ವಿಜ್ಞಾನಿ ಚಾಮರಾಜ್ ಪ್ರಸಾದ್ ಹೇಳಿದರು.

ಸ್ಥಳೀಯ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘ ಕಾಫಿ ಪಲ್ಪಿಂಗ್ ಚಟುವಟಿಕೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯ ನೀರು ಸಂಸ್ಕರಣೆ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನವೀನ ತಂತ್ರಜ್ಞಾನವನ್ನು ಸಿ.ಎಸ್.ಐ.ಆರ್. - ಸಿ.ಎಫ್.ಟಿ. ಆರ್.ನ ಸೂಕ್ಷ್ಮ ಜೀವಶಾಸ್ತ್ರ ಮತ್ತು ಹುನುಗುವಿಕೆ ತಂತ್ರಜ್ಞಾನ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಕೆ. ಅನು ಅಪ್ಪಯ್ಯ ಅಭಿವೃದ್ಧಿ ಪಡಿಸಿದ್ದಾರೆ ಎಂದು ವಿವರಿಸಿದರು.

ಕಾಫಿ ಪಲ್ಪ್‍ನಿಂದ ಮೂಡುವ ತ್ಯಾಜ್ಯದ ನೀರಿನ ಸಂಸ್ಕರಣೆ ಹೊಸ ವಿಧಾನ ಬಯೋ ಟ್ರೀಟ್. ಇದು ಪುಡಿ ರೂಪದ ಸೂಕ್ಷ್ಮ ಜೀವಾಣುಗಳ ಮಿಶ್ರಣ. ಕಳೆದ 5 ಕಾಫಿ ಋತುಗಳಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನದ ಕಾಫಿ ತೋಟಗಳ ಪಲ್ಪ್ ಘಟಕಗಳಲ್ಲಿ ಪರೀಕ್ಷಿಸಲಾಗಿದೆ ಎಂದು ತಿಳಿಸಿದರು.

ನೀರನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಬಹುದು. ತ್ಯಾಜ್ಯ ನೀರು ಕಂದು ಬಣ್ಣಕ್ಕೆ ತಿರುಗುವದಿಲ್ಲ. ಕೆನೆಗಟ್ಟುವದಿಲ್ಲ. ಹಾನಿಕಾರಕ ಅನಿಲ ವಾತಾವರಣ ಸೇರುವದಿಲ್ಲ. ದುರ್ನಾತ ಬೀರುವದಿಲ್ಲ. ಸಂಸ್ಕರಿಸಿದ ನೀರನ್ನು 20 ದಿನಗಳ ನಂತರ ಕೃಷಿಗೆ ಬಳಸಬಹುದು ಎಂದು ಚಾಮರಾಜ್ ಪ್ರಸಾದ್ ತಿಳಿಸಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ದಿವಾಕರ್, ಶರತ್ ಶೇಖರ್, ಕಾರ್ಯದರ್ಶಿ ಎಂ.ಟಿ. ಮಲ್ಲೇಗೌಡ, ಖಜಾಂಚಿ ರಂಗಸ್ವಾಮಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.