ಮಡಿಕೇರಿ, ಅ. 1: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯಿದೆ ನೀತಿಯನ್ನು ಕೈಬಿಡಬೇಕು ಹಾಗೂ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆ. ಕೊಡಗು ಜಿಲ್ಲೆಯ ಯಾವದೇ ಕಾಫಿ ಬೆಳೆಗಾರರು ಕಾಫಿ ಕಾಯ್ದೆ ತಿದ್ದುಪಡಿಗೆ ಬೇಡಿಕೆ ಮಂಡಿಸಿಲ್ಲ. ಹೀಗಿರುವಾಗ ಕೇಂದ್ರ ಸರಕಾರ ಕಾಫಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವದು ಕಾಫಿ ಬೆಳೆಗಾರರಲ್ಲಿ ಗೊಂದಲ ಹಾಗೂ ಸಮಸ್ಯೆ ಹುಟ್ಟು ಹಾಕಿದೆ.
ಇದೀಗ ಜಾರಿಯಲ್ಲಿರುವ ಕಾಫಿ ಕಾಯ್ದೆಯಿಂದ ಯಾವದೇ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿರುವದಿಲ್ಲ. ಕೇಂದ್ರ ಸರಕಾರ ನಿರ್ಧರಿಸಿದಂತೆ ನೂತನ ಕಾಫಿ ಕಾಯಿದೆ ಜಾರಿಯಾದರೆ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ. ಹೊಸ ಕಾಫಿ ನೀತಿಯಿಂದ ಅಧಿಕಾರಿಗಳು ಕಾಫಿ ಗುಣಮಟ್ಟ ಪರಿಶೀಲನೆ ನೆಪದಲ್ಲಿ ಕಾಫಿ ಹಲ್ಲರ್ಗಳಿಗೆ ಭೇಟಿ ಕೊಟ್ಟು ಕಾಫಿಯ ಗುಣಮಟ್ಟದ ಬಗ್ಗೆ ಕಿರುಕುಳ ನೀಡಿದಲ್ಲಿ ಅದು ಬೆಳೆಗಾರರ ಮೇಲೆ ದುಷ್ಪರಿಣಾಮ ಬೀರಲಿದೆ ಮತ್ತು ಕಾಫಿ ಬೆಳೆಗಾರರು ಪ್ರತಿ ವರ್ಷ ಅವರವರ ಕಾಫಿ ತೋಟದ ವಿವರವನ್ನು ಸಲ್ಲಿಸಿ ನೋಂದಾಯಿಸಿ ನವೀಕರಿಸಬೇಕೆಂದು ತಿಳಿಸಲಾಗಿದೆ. ಪ್ರತಿ ವರ್ಷ ನವೀಕರಣಕ್ಕೆ ಶುಲ್ಕ ವಿಧಿಸಿ ನವೀಕರಣಕ್ಕೆ ಹೋದಾಗ ವಿಳಂಬ ನೀತಿ ಅನುಸರಿಸುವ ಸಂಭವವಿದ್ದು, ಇಲ್ಲೂ ಬೆಳೆಗಾರರು ಶೋಷಣೆಗೆ ಒಳಗಾಗಲಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಕಾಫಿ ವಹಿವಾಟು ಸರಿಯಾಗಿ ನಡೆಯುತ್ತಿದ್ದು, ಮತ್ತೆ ಕಾಫಿ ಮಂಡಳಿ ತನ್ನ ನಿಯಂತ್ರಣಕ್ಕೆ ಬೆಳೆಗಾರರನ್ನು ತರುವ ಹುನ್ನಾರ ಈ ನೂತನ ಕಾಯಿದೆಯಲ್ಲಿದೆ.
ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಹಿತ ಕಾಯುವಲ್ಲಿ ಕೇಂದ್ರ ಸರಕಾರ ಜಾರಿಗೆ ತರಲು ನಿರ್ಧರಿಸಿರುವ ನೂತನ ಕಾಫಿ ಕಾಯಿದೆ ನೀತಿಯನ್ನು ಕೈಬಿಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಕರ್ನಾಟಕದ ನಾಲ್ಕು ಕಾವೇರಿ ಕೊಳದಲ್ಲಿ ನೀರಿನ ಪ್ರಮಾಣ ತೀವ್ರ ಮಟ್ಟದಲ್ಲಿ ಕುಸಿದಿದ್ದು, ಕಾವೇರಿ ನೀರನ್ನು ಅವಲಂಭಿಸಿರುವ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರಿದನ್ನು ಮನಗಾಣದೆ ಹಾಗೂ ಕಾವೇರಿ ಕೊಳದ ನಾಲ್ಕು ಜಲಾಶಯಗಳಲ್ಲಿರುವ ನೀರಿನ ಪ್ರಮಾಣವನ್ನು ಪರಿಶೀಲಿಸದೆ ತಮಿಳುನಾಡಿಗೆ ಮತ್ತೆ ಮತ್ತೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವದನ್ನು ಮರುಪರಿಶೀಲಿಸುವಲ್ಲಿ ಹಾಗೂ ಕರ್ನಾಟಕ ರಾಜ್ಯ ಮತ್ತು ತಮಿಳುನಾಡು ರಾಜ್ಯದ ನಡುವೆ ಶಾಂತಿ-ಸೌಹಾರ್ದತೆ ಮೂಡಿಸುವಲ್ಲಿ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸುವಂತೆಯೂ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ ಮೂಲಕ ಮನವಿ ಮಾಡಿದೆ. ಹಾಗೆಯೇ ಮಹದಾಯಿ ಕಳಸಾ-ಬಂಡೂರಿ ನದಿ ನೀರಿನ ವಿವಾದ ಮೂರು ರಾಜ್ಯಗಳ ನಡುವೆ ಇದ್ದು, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಧಾನ ಮಂತ್ರಿಗಳು ಕರೆದು ಈ ನೀರಿನ ವಿವಾದದ ಸಮಸ್ಯೆಯನ್ನು ಬಗೆಹರಿಸ ಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ವಿಷಾಯಾಧರಿ ತವಾದ ಹೋರಾಟವನ್ನು ನಡೆಸುತ್ತಿರುವದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರುಗಳಾದ ಬಿ.ಜಿ. ಮಿಟ್ಟು ಚಂಗಪ್ಪ, ಬಿ.ಕೆ. ಕೃಷ್ಣ, ಕಾವೇರಮ್ಮ ಸೋಮಣ್ಣ, ಎಸ್.ಎಂ. ಚಂಗಪ್ಪ, ವಾಸು ಕುಟ್ಟಪ್ಪ, ಕೆ.ಎಂ. ಗಣೇಶ್, ಕೆ.ಎಂ. ಲೋಕೇಶ್, ಶಿವು ಮಾದಪ್ಪ, ಅಬ್ದುಲ್ ರಜಾಕ್, ವಿ.ಪಿ. ಸುರೇಶ್, ಪುಷ್ಪ ಪೂಣಚ್ಚ, ಸುನಿಲ್ ನಂಜಪ್ಪ, ಟಿ.ಎಂ. ಅಯ್ಯಪ್ಪ, ಜುಲೇಕಾಬಿ, ಚುಮ್ಮಿ ದೇವಯ್ಯ, ಬಿ.ಎನ್. ಪ್ರಕಾಶ್, ಉದಯಕುಮಾರ್, ಮಂಜುನಾಥ್ ಕುಮಾರ್ ಮತ್ತಿರರು ಪಾಲ್ಗೊಂಡಿದ್ದರು.