ಮಡಿಕೇರಿ, ಸೆ. 23: ಹೊಸ ಕಾಫಿ ಕಾನೂನು ತಿದ್ದುಪಡಿಯನ್ನು ಸಮರ್ಥಿಸಿ ಅಸಂಬದ್ಧ ಹೇಳಿಕೆ ನೀಡಿರುವ ಸುಬ್ರಮಣ್ಯ ಉಪಾಧ್ಯಾಯರ ಹೇಳಿಕೆಯನ್ನು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಖಂಡಿಸಿದೆ.

ನೂತನ ಕಾಫಿ ಕಾನೂನು ತಿದ್ದುಪಡಿ ಕಾಫಿ ಬೆಳೆಗಾರರಿಗೆ ಮಾರಕವಾಗಲಿದೆ ಎಂಬದರಲ್ಲಿ ಯಾವದೇ ಸಂಶಯವಿಲ್ಲ. ಅದರಲ್ಲೂ ಕೊಡಗಿನ ಕಾಫಿ ಬೆಳೆಗಾರರು ಮೂರು ದಶಕಗಳ ಹಿಂದೆ ಅನುಭವಿಸಿದ ಸಂಕಟಗಳು ಈಗಲೂ ಕೂಡ ಕಾಫಿ ಬೆಳೆಗಾರರ ಮನಸ್ಸಿನಲ್ಲಿದೆ. ಈ ನೂತನ ಕಾಯ್ದೆ ನ್ಯೂನ್ಯತೆಗಳ ಬಗ್ಗೆ ಸ್ವತಃ ಕಾಫಿ ಬೆಳೆಗಾರರಾದ ಬಿ.ಟಿ. ಪ್ರದೀಪ್ ಅವರ ಅಭಿಪ್ರಾಯ ಸಮಯೋಚಿತವಾಗಿದೆ. ಬೆಳೆಗಾರರು ಇದರ ಬಗ್ಗೆ ಜಾಗೃತರಾಗಲು ಪ್ರದೀಪ್ ನೀಡಿದ ಸಲಹೆ ಕೂಡ ಸೂಕ್ತವಾಗಿದೆ ಎಂದು ಬ್ಲಾಕ್ ಕಾರ್ಯದರ್ಶಿ ತೆನ್ನಿರ ಮೈನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೆಂಗು, ಅಡಿಕೆ ಬೆಳೆಯುವ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅವರ ಅಭಿಪ್ರಾಯ ಗೊಂದಲದ ಗೂಡಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಈಗಲೂ ವಿಶೇಷ ಸ್ಥಾನವಿದೆ. ಕಾಫಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬೆಳೆಗಾರರು ಮತ್ತು ಕಾರ್ಮಿಕರಿಗೆ ತಿಳಿದಿದೆ. ಕಾಫಿ ಕಲಬೆರಕೆ ಮಾಡುವ ಬಗ್ಗೆ ಬೆಳೆಗಾರರಿಗಾಗಲಿ, ಕಾರ್ಮಿಕರಿಗಾಗಲಿ ತಿಳಿದಿಲ್ಲ. ಬಹುಶಃ ಕಲಬೆರಕೆ ಪತ್ತೆಹಚ್ಚಲು ಉಪಾಧ್ಯಾಯರಿಗೆ ಆಸಕ್ತಿ ಇದ್ದಲ್ಲಿ ನೈತಿಕ ಪತ್ತೆದಳ ರಚಿಸಿ ಅದಕ್ಕೆ ಅಧ್ಯಕ್ಷರಾಗಲಿ ಎಂದು ಹೇಳಿದ್ದಾರೆ.

ನೂತನ ಕಾಯ್ದೆ ಬಗ್ಗೆ ಬೆಳೆಗಾರರಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಹದಿನೈದು ದಿವಸಗಳಿದ್ದಾಗ ಬೆಳೆಗಾರರಿಗೆ ಮಾಹಿತಿ ದೊರೆತಿದ್ದು, ಆಕ್ಷೇಪಣೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ಸತ್ಯ ಉಪಾಧ್ಯಾಯರಿಗೆ ತಿಳಿದಿಲ್ಲವೇ? ಕೇವಲ ಬಿಜೆಪಿ ನಾಯಕರಾದ ಮಾತ್ರಕ್ಕೆ ಬೆಳೆಗಾರರಿಗೆ ಮಾರಕವಾದ ಕಾನೂನನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿ ಕೊಳ್ಳುವದು ಸರಿಯಲ್ಲ. ಹೊಸ ಕಾಯ್ದೆ ಯಲ್ಲಿ ಬೆಳೆಗಾರರೇ ಅಧ್ಯಕ್ಷರಾಗಿರುತ್ತಾರೆ. ಇದರಿಂದ ಬೆಳೆಗಾರರಿಗೆ ಪೂರಕ ವಾಗಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ ಅಧ್ಯಕ್ಷರು ಸಭೆ ಕರೆಯುವದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕೆಲಸಗಳು ಕಾರ್ಯದರ್ಶಿಯವರೇ ನಡೆಸುವದೆಂಬ ಕನಿಷ್ಟ ಜ್ಞಾನ ಕೂಡ ಉಪಾಧ್ಯಾಯರಿಗೆ ಇಲ್ಲದಿರುವದು ಖೇಧವೆನಿಸುತ್ತದೆ.

ಇನ್ನೂ ಮುಂದಕ್ಕಾದರೂ ಇಂತಹ ಸೂಕ್ಷ್ಮ ವಿಚಾರಗಳಿದ್ದಾಗ ರಾಜಕೀಯ ಪ್ರೇರಿತವಾಗಿ ವಿಷಯದ ತಿಳುವಳಿಕೆ ಇಲ್ಲದೆ ಅಸಂಬದ್ಧ ಹೇಳಿಕೆ ನೀಡುವದನ್ನು ಉಪಾಧ್ಯಾಯರು ನಿಲ್ಲಿಸಲಿ. ಎಲ್ಲಾ ಬೆಳೆಗಾರರು ರಾಜಕೀಯ ಮರೆತು ಒಗ್ಗಟ್ಟಾಗಿ ಈ ಮಾರಕವಾದ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡುವದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.