ಚೆಟ್ಟಳ್ಳಿ, ಆ. 18: ಇತ್ತೀಚಿನ ದಿನಗಳಲ್ಲಿ ಮಳೆ ಮತ್ತು ತಂಪು ವಾತಾವರಣದಿಂದ ಮಣ್ಣಿನಲ್ಲಿ ನೀರಿನ ಅಂಶ ಜಾಸ್ತಿಯಾಗಿ ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಅರೆಪಕ್ವ ಕಾಯಿಗಳು ಉದುರುತ್ತಿರುವದು ಕಂಡುಬಂದಿದೆ. ಈ ಬಗ್ಗೆ ಕಾಫಿ ಸಂಶೋಧನಾ ಉಪಕೇಂದ್ರದ ವಿಜ್ಞಾನಿಗಳು ನಡೆಸಿದ ಸಮೀಕ್ಷೆಯ ಪ್ರಕಾರ ಅಲ್ಲಲ್ಲಿ ಜಾಸ್ತಿ ಮಳೆ ಬೀಳುವ ಪ್ರದೇಶಗಳಲ್ಲಿ ಅರೆ ಪಕ್ವ ಕಾಯಿಗಳು ಸ್ವಲ್ಪಮಟ್ಟಿಗೆ ಉದುರುವದು ತಿಳಿದುಬಂದಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಆಗಾಗ ಮಳೆ ಮತ್ತು ಬಿಸಿಲಿನ ಪ್ರಮಾಣ ಹೆಚ್ಚಾಗಿ ಕಾಯಿ ತೊಟ್ಟು (ಸ್ಟಾಕ್ ರೋಟ್) ರೋಗದಿಂದ ಕಾಯಿಗಳು ಉದುರುವದು ಕಂಡುಬಂದಿದೆ. ಈ ಶಿಲೀಂದ್ರದಿಂದ ರೋಗ ಕೊಲೆಟೊ ಟ್ರೈಕಮ್ ಗ್ಲಿಯೋಸ್ಪೊರೋಯಿಡಸ್ ಎಂಬ ಶಿಲೀಂದ್ರದಿಂದ ಕಂಡುಬರುತ್ತದೆ.

ಈ ವರ್ಷ ಕಾಫಿ ಬೆಳೆಯುವ ಎಲ್ಲಾ ಪ್ರದೇಶದಲ್ಲೂ ಹೂಮಳೆ ಸರಿಯಾದ ಪ್ರಮಾಣದಲ್ಲಿ ಆಗಿಲ್ಲ. ಅದೇ ರೀತಿ ಕೊಡಗಿನಲ್ಲಿ ರೋಬಸ್ಟಾ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಹೂಮಳೆ ಆಗಿಲ್ಲ. ಕೆಲವು ಪ್ರದೇಶಗಳಲ್ಲಿ ಮತ್ತು ಕೆಲವು ತೋಟಗಳಲ್ಲಿ ತುಂತುರು ನೀರಾವರಿ ಕೊಡಲು ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಹೂ ಮೊಗ್ಗುಗಳು ಸರಿಯಾಗಿ ಅರಳದೇ ಕಾಯಿ ಕಟ್ಟಿರುವದು ಕಡಿಮೆ ಆಗಿದೆ. ಆದರೆ, ಅರೇಬಿಕಾ ಕಾಫಿಯಲ್ಲಿ ಕಾಯಿ ಕಟ್ಟುವದು ಉತ್ತಮವಾಗಿದೆ. ಜಾಸ್ತಿಯಾಗಿ ಕಾಫಿ ಗಿಡಗಳಲ್ಲಿ ಚಿಕ್ಕದಾದ ಕಾಯಿಗಳು ಉದುರುವದು ಹೆಚ್ಚಾಗಿ ಕಾಣುತ್ತ್ತಿದೆ. ಆದರೆ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿರು ವದರಿಂದ ಕಾಯಿ ಉದುರುವದು ಕಡಿಮೆಯಾಗಿದೆ. ಆದರೆ ಕೆಲವು ಜಾಸ್ತಿ ಮಳೆಯಾಗಿರುವ ಪ್ರದೇಶಗಳಲ್ಲಿ ಕಾಯಿ ತೊಟ್ಟು ರೋಗದಿಂದ ಸಣ್ಣದಾದ ಕಾಯಿಗಳು ಉದುರುವದು ಕಂಡುಬಂದಿದೆ.

ಕಾಫಿ ಕಾಯಿಗಳು ಬೆಳೆಯುವಾಗ ಸ್ವಲ್ಪ ಪ್ರಮಾಣದಲ್ಲಿ ಉದುರುವದು ಸಾಮಾನ್ಯ ಸಂಗತಿ ಆಗಿದೆ. ಸಾಮಾನ್ಯವಾಗಿ ಶೇ. 60 ರಷ್ಟು ಹೂ ಕಚ್ಚಿದ ಕಾಯಿಗಳು ಬೆಳೆದು ಹಣ್ಣಾಗುವದು ಸಾಮಾನ್ಯ. ಕಾಫಿ ಬೆಳೆಗಾರರು ತೋಟದಲ್ಲಿ ಕಾಯಿ ಉದುರುವದು ಕಂಡು ಬಂದಲ್ಲಿ ಈ ಸಮಸ್ಯೆಯನ್ನು ನಿವಾರಿಸಲು ಈ ಕೆಳಗೆ ತಿಳಿಸಿರುವ ಕೆಲಸಗಳನ್ನು ಮಾಡಲೇ ಬೇಕಾದ ಅನಿವಾರ್ಯತೆ ಇದೆ.

ಕಾಯಿ ತೊಟ್ಟು ರೋಗ ಕಂಡುಬಂದ ಗಿಡಗಳಿಗೆ ಒಂದು ಬ್ಯಾರಲ್ ನೀರಿಗೆ 120 ಗ್ರಾಂ. ಬವಿಸ್ಟಿನ್ ಎಂಬ ಶಿಲೀಂದ್ರ ನಾಶಕವನ್ನು ಮಿಶ್ರಣ ಮಾಡಿ ಕಾಯಿಗಳಿಗೆ ತಗಲುವಂತೆ ಸಿಂಪರಣೆ ಮಾಡಬೇಕು.

ಕಾಫಿ ಗಿಡದ ಬುಡದಲ್ಲಿರುವ ಒಣಗಿದ ಎಲೆಗಳು, ಕಸ ಕಡ್ಡಿಗಳನ್ನು ನಾಲ್ಕು ಗಿಡದ ಮಧ್ಯದಲ್ಲಿ ರಾಶಿ ಹಾಕಿ ನೀರು ನಿಲ್ಲದಂತೆ ಮಾಡಬೇಕು. ಹಾಗೆಯೇ ಮಳೆ ಬಂದಾಗ ಬೇಗನೆ ಒಣಗುವ ರೀತಿಯಲ್ಲಿ ನೋಡಿಕೊಳ್ಳ ಬೇಕು. ತೋಟದಲ್ಲಿ ಕಾಲುವೆಗಳನ್ನು ಮಾಡಿ ಮಳೆಯ ನೀರು ಬಸಿದು ಹೋಗುವಂತೆ ಮಾಡಬೇಕು.

ತೋಟದಲ್ಲಿರುವ ಕಾಲುವೆಗಳನ್ನು, ತೊಟ್ಟಿಲು ಗುಂಡಿಗಳನ್ನು ಸಾಧ್ಯ ವಾದಷ್ಟು ಶುಚುಗೊಳಿಸಿ, ಬೇರಿನ ಉಸಿರಾಟಕ್ಕೆ ಸಹಾಯವಾಗುವಂತೆ ಮಾಡಬೇಕು. ನೆರಳಿನ ಮರಗಳ ಕೆಳಹಂತದ ಜೋಲು ರೆಕ್ಕೆಗಳನ್ನು ಕಸಿ ಮಾಡಿ ಸರಿಯಾದ ರೀತಿಯಲ್ಲಿ ಬೆಳಕು ಬರುವಂತೆ ಮಾಡಬೇಕು. ಇದರಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ಜಾಸ್ತಿಯಾಗುವಂತೆ ಮಾಡಬಹುದು ಮತ್ತು ರೋಗ ರುಜಿನಗಳ ಬಾಧೆಯಿಂದ ಮುಕ್ತರಾಗಬಹುದು. ಅರೇಬಿಕಾ ಕಾಫಿಗೆ ಶೇ. 50 ರಷ್ಟು ಮತ್ತು ರೊಬಸ್ಟ್ಟಾ ಕಾಫಿಗೆ ಶೇ. 30 ರಷ್ಟು ನೆರಳು ಇರುವ ಹಾಗೆ ಮರ ಕಸಿ ಮಾಡಬೇಕು.

ಬೋರ್ಡೊ ದ್ರಾವಣದ ಸಿಂಪರಣೆ ಮಾಡಿಲ್ಲದಿದ್ದರೆ, ಒಂದು ಬ್ಯಾರೆಲ್ ಬೋರ್ಡೊ ದ್ರಾವಣ ದೊಂದಿಗೆ ಒಂದು ಕೆಜಿ ಯೂರಿಯಾ + 750ಗ್ರಾಂ ಒಔP +500 ಗ್ರಾಂ ಜಿಂಕ್ ಸಲ್ಫೇಟ್ ಮತ್ತು 50 ಮಿಲೀ ಪ್ಲಾನೋಫಿಕ್ಸ್ ಮಿಶ್ರಣ ಮಾಡಿ ಎಲೆಗಳ ತಳ ಮತ್ತು ಮೇಲ್ಬಾಗಕ್ಕೆ ಸಿಂಪರಣೆ ಮಾಡಬೇಕು.

ಬೋರ್ಡೊ ದ್ರಾವಣದ ಸಿಂಪರಣೆ ಮುಗಿದಿದ್ದರೆ ಪೋಲಿಯಾರ್ ಸಿಂಪರಣೆಯಾಗಿ ಒಂದು ಕೆಜಿ ಯೂರಿಯಾ + 750 ಒಔP ++500 ಗ್ರಾಂ ಜಿಂಕ್ ಸಲ್ಫೇಟ್ + 50 ಮಿಲೀ ಪ್ಲಾನೋಫಿಕ್ಸ್ 200ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಇದೇ ರೀತಿ ಬೋರ್ಡೋ ದ್ರಾವಣವನ್ನು ಮೇಲೆ ಹೇಳಿದ ಪೋಷಕಾಂಶಗಳೊಂದಿಗೆ ಮೇ ತಿಂಗಳ ಕೊನೆಯಲ್ಲಿ ರೋಬಸ್ಟಾ ಗಿಡಗಳಿಗೂ ಸಿಂಪರಣೆಯನ್ನು ಮಾಡಿದ್ದಲ್ಲಿ ಅರೆಪಕ್ವ ಕಾಯಿ ಉದುರುವಿಕೆಯನ್ನು ತಡೆಯ ಬಹುದು.

ಆಗಸ್ಟ್ ತಿಂಗಳಿನಲ್ಲಿ ಬಿಸಿಲು ಬಂದಾಗ ಒಂದು ಎಕರೆಗೆ 1 ಬ್ಯಾಗ್ ಯೂರಿಯಾ ಮತ್ತು ಳಿ ಬ್ಯಾಗ್ ಒಔP ಗೊಬ್ಬರವನ್ನು ಕೊಡುವದ ರಿಂದ ಕಾಯಿಗಳ ಬೆಳವಣಿಗೆ ಅಭಿವೃದ್ಧಿಪಡಿಸಿ ಒಳ್ಳೆಯ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು.

ಕಾಫಿ ಗಿಡಗಳಲ್ಲಿ ಕಸಿ ಮಾಡದೇ ಇದ್ದಲ್ಲಿ ಅನಾವಶ್ಯಕ ರೆಂಬೆಗಳನ್ನು ತೆಗೆದು ಹಾಕಿ ಬಿಡಬೇಕು. ಇದರಿಂದ ರೋಗ ರುಜಿನಗಳ ಪ್ರಮಾಣ ಕಡಿಮೆಯಾಗಿ ಕಾಯಿ ಉದುರುವದು ಕಡಿಮೆಯಾಗುತ್ತದೆ.

ಈ ಕೆಲಸಗಳನ್ನು ಸರಿಯಾಗಿ ಮಾಡಿದಲ್ಲಿ ಕಾಯಿ ಉದುರುವಿಕೆ ಯನ್ನು ತಡೆಗಟ್ಟಿ ಉತ್ತಮ ಇಳುವರಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿ ಅಥವಾ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಬೇಕಾಗಿ ಕೋರಿದೆ.

-ಕರುಣ್ ಕಾಳಯ್ಯ