*ಗೋಣಿಕೊಪ್ಪಲು, ಸೆ. 24: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 73ನೇ ವಾರ್ಷಿಕ ಮಹಾಸಭೆಯು ಸಂಘದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಳಮೇಂಗಡ ಎ. ವಿವೇಕ್ ಅವರು ಸಂಘದಲ್ಲಿ 1478 ಸದಸ್ಯರಿದ್ದು, ಸದಸ್ಯರಿಂದ ರೂ. 121.39 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘವು ಜಿಲ್ಲಾ ಬ್ಯಾಂಕಿನಿಂದ 400 ಲಕ್ಷ ಸಾಲ ಪಡೆದಿರುತ್ತದೆ. ಸಂಘದಿಂದ ಕೆ.ಸಿ.ಸಿ. ಸಾಲ, ಜಾಮೀನು ಸಾಲ, ಪಿಗ್ಮಿ ಸಾಲ, ಸ್ವಸಹಾಯ ಸಾಲ ಸೇರಿ ಒಟ್ಟು ರೂ. 823.73 ಲಕ್ಷ ಸಾಲ ನೀಡಲಾಗಿದೆ. ಠೇವಣಾತಿಗಳಿಂದ ರೂ. 548.38 ಲಕ್ಷ ಸಂಗ್ರಹಿಸಲಾಗಿದೆ. ವಿವಿಧ ಸಂಸ್ಥೆಗಳಲ್ಲಿ ರೂ. 668.18 ಲಕ್ಷ ಧನವಿನಿಯೋಗ ಮಾಡಲಾಗಿದೆ. 31.03.2016ರ ಅಂತ್ಯಕ್ಕೆ ಶೇ. 100ರಷ್ಟು ಸಾಲ ವಸೂಲಾತಿ ಆಗಿರುತ್ತದೆ. 2016ರ ಮಾರ್ಚ್ ಅಂತ್ಯಕ್ಕೆ ಸಂಘವು ರೂ. 58.06 ಲಕ್ಷ ಲಾಭ ಗಳಿಸಿರುತ್ತದೆ. ಸಂಘದ ಯಶಸ್ವಿನಿ ಆರೋಗ್ಯ ವಿಮೆಯಲ್ಲಿ ನೋಂದಾಯಿಸಿಕೊಂಡಿರುವ ಸದಸ್ಯರಲ್ಲಿ 10 ಸದಸ್ಯರು ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ರೂ. 3.92 ಲಕ್ಷಗಳ ಸೌಲಭ್ಯವನ್ನು ಪಡೆದುಕೊಂಡಿರುವದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷ ಕೆ.ಪಿ. ನಂಜಪ್ಪ, ನಿರ್ದೇಶಕರುಗಳಾದ ಎಂ.ಎನ್. ಸತೀಶ್, ಕೆ.ಎಸ್. ಬೋಪಣ್ಣ, ಕೆ.ಆರ್. ಸುರೇಶ್, ಸಿ.ಬಿ. ಬೆಳ್ಯಪ್ಪ, ಸಿ.ಬಿ. ರೇಖಾ ಬೋಪಣ್ಣ, ಹೆಚ್.ಕೆ. ಬೊಗ್ಗುರುರವರುಗಳು ಉಪಸ್ಥಿತರಿದ್ದರು. ನಿರ್ದೇಶಕಿ ಲೀನಾ ಬೋಪಣ್ಣ ಪ್ರಾರ್ಥಿಸಿ, ಎಂ.ಎನ್. ಅಶ್ವಿನಿ ವಂದಿಸಿದರು.