ಮಡಿಕೇರಿ, ನ. 1: ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆಯು ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ನಡೆಯಿತು.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿವಿಧ ಇಲಾಖೆಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮ ಸಂದರ್ಭದಲ್ಲಿ ಪ್ರಾಧಿಕಾರದ ಧೆÉ್ಯಯೋದ್ದೇಶಗಳು ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.

ನವೆಂಬರ್ 26 ರಂದು ಕಾನೂನು ದಿನಾಚರಣೆ ಆಯೋಜಿಸುವದು, ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವದು, ಕಾನೂನಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು, ಕಾನೂನು ಅರಿವು-ನೆರವು ಬಗ್ಗೆ ಮಾಹಿತಿ ಒದಗಿಸುವದು, ಮೆಘ ಲೋಕ ಅದಾಲತ್ ಸಂದರ್ಭದಲ್ಲಿ ರಾಜಿ ಮೂಲಕ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸುವದು ಮತ್ತಿತರ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು, ಸರ್ಕಾರದ ಕಾರ್ಯಕ್ರಮಗಳು ಬಡವರಿಗೆ ಸಮರ್ಪಕವಾಗಿ ದೊರೆಯುವದರ ಜೊತೆಗೆ ಕಾನೂನುಗಳ ಬಗ್ಗೆಯೂ ಜನ ಸಾಮಾನ್ಯರಲ್ಲಿ ಅರಿವು ಇರಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಆಯೋಜಿಸುವ ಕಾರ್ಯಕ್ರಮ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಕೈಜೋಡಿಸಿ, ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರವು ಹಲವು ಇಲಾಖೆಗಳ ಜೊತೆಗೂಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾನೂನಿನ ಮಹತ್ವ ಅರಿವಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರದ ಜೊತೆ ಕೈಜೋಡಿಸಿ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ಮಾಡಿದರು.

ಒಂದನೇ ಅಪರ ಸೆಷನ್ ನ್ಯಾಯಾಧೀಶ ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್, ನ್ಯಾಯಾಧೀಶ ರಮೇಶ್ ಬಾಬು, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಸರ್ಕಾರಿ ಅಭಿಯೋಜಕ ಶ್ರೀಧರ ನಾಯಕ್, ವಕೀಲರಾದ ನೆರವಂಡ ದೇವಯ್ಯ, ತಮ್ಮಯ್ಯ, ಮೀನಾಕುಮಾರಿ, ರೀಮಾ, ಪುಷ್ಪ, ಜಿ.ಪಂ.ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಡಿವೈಎಸ್‍ಪಿ ಛಬ್ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ದೇವಿ ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು, ವ್ಯವಸ್ಥಾಪಕ ರವೀಂದ್ರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು, ಮತ್ತಿತರರು ಭಾಗವಹಿಸಿದ್ದರು.