ಪೊನ್ನಂಪೇಟೆ, ಜು. 20: ಯಾವದೇ ರೀತಿಯ ಕಾನೂನು ಹೋರಾಟಕ್ಕೆ ಯಾವದೇ ವ್ಯಕ್ತಿಗಳು ಕೂಡ ಸ್ವತಂತ್ರರು ಮತ್ತು ಇದು ಸ್ವಾಗತಾರ್ಹ ಕೂಡ. ಆದರೆ ಕಾನೂನಿಗೆ ರಾಜಕೀಯದ ಲೇಪ ಹಚ್ಚಿ ಈ ಮೂಲಕ ಮಹತ್ವವಾದ ಮತ್ತು ಪವಿತ್ರವಾದ ಕಾನೂನನ್ನೇ ರಾಜಕೀಕರಣಗೊಳಿಸುತ್ತಿರುವದು ಸರಿಯಲ್ಲ. ಇದು ಸಮಾಜದಲ್ಲಿ ಹೆಚ್ಚು ದುಷ್ಪರಿಣಾಮಕ್ಕೆ ನಾಂದಿಯಾಗುತ್ತದೆ ಎಂದು ರಾಜ್ಯ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಜಿಲ್ಲೆಗೆ ಖಾಸಗಿ ಭೇಟಿ ನೀಡಿದ ಸಂದರ್ಭ ಅವರನ್ನು ‘ಶಕ್ತಿ ‘ ಸಂಪರ್ಕಿಸಿ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿಸಿದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇದೀಗ ರಾಜ್ಯದ ಹಲವೆಡೆ ‘ಸಾವು ರಾಜಕಾರಣ’ ಹೆಚ್ಚಾಗುತ್ತಿದೆ. ಈ ರಾಜಕಾರಣದ ಹಿಂದೆ ಸತ್ತ ವ್ಯಕ್ತಿಗಳ ಕುಟುಂಬದವರ ಹಿತಾಸಕ್ತಿಗಿಂತ ರಾಜಕೀಯ ಶಕ್ತಿಗಳ ಹಿತವೇ ಮೊದಲ ಆದ್ಯತೆಯಾಗುತ್ತಿದೆ. ಈ ರೀತಿಯ ‘ಸಾವು ರಾಜಕಾರಣ’ ಯಾರಿಗೂ ಶೋಭೆ ತರುವಂತದಲ್ಲ ಎಂದು ಹೇಳಿದರು.ಮಂಗಳೂರಿನಲ್ಲಿ ಡಿ.ವೈ.ಎಸ್.ಪಿ. ಆಗಿದ್ದ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಸಾವು ನಿಜಕ್ಕೂ ವಿಷಾದನೀಯ.