ಸೋಮವಾರಪೇಟೆ, ಜ. 17: ರಾಜ್ಯದಾದ್ಯಂತ ಬರದ ಪರಿಸ್ಥಿತಿ ಇದ್ದು, ಮಲೆನಾಡಿನ ಮಡಿಲು ಕೊಡಗು ಸಹ ಬರದಿಂದ ಹೊರತ್ತಾಗಿಲ್ಲ. ಹಸಿರನ್ನು ಹೊದ್ದು ನಳ ನಳಿಸುತ್ತಿದ್ದ ಅರಣ್ಯ ಮರಗಳೂ ಸಹ ಪ್ರಸಕ್ತ ವರ್ಷ ಜನವರಿ ತಿಂಗಳಿಗೆ ತನ್ನ ಎಲೆಗಳನ್ನು ಒಣಗಿಸಿಕೊಂಡು ನೆಲಕ್ಕೆ ಬೀಳಿಸುತ್ತಿದೆ.ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತೆ ಇರುವ ಅರಣ್ಯಗಳಲ್ಲಿ ಇರುವ ತೇಗದ ಮರದ ಎಲೆಗಳು ಈಗಾಗಲೇ ಒಣಗಿ ನೆಲಕ್ಕೆ ಬೀಳುತ್ತಿದೆ. ಬೀಸುವ ಗಾಳಿಗೆ ರಸ್ತೆಯ ಪಕ್ಕದಲ್ಲೇ ಒಣಗಿದ ಎಲೆಗಳು ಬಿದ್ದಿದ್ದು, ಕಾಡ್ಗಿಚ್ಚು ಹಬ್ಬಲು ಎದುರು ನೋಡುತ್ತಿವೆ.
ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಅಥವಾ ಪಾದಚಾರಿಗಳು ಧೂಮಪಾನ ಮಾಡಿ ಬೆಂಕಿಯ ಕಿಡಿಯನ್ನು ಹೊರಹಾಕಿದರೂ ಸಾಕು ಕ್ಷಣಮಾತ್ರದಲ್ಲಿ ಕಾಡ್ಗಿಚ್ಚು ಇಡೀ ಅರಣ್ಯ ಪ್ರದೇಶಕ್ಕೆ ಹಬ್ಬಿ ಅಸಂಖ್ಯಾತ ಜೀವಸಂಕುಲಗಳು, ಸಣ್ಣಪುಟ್ಟ ಗಿಡ-ಸಸ್ಯಗಳ ನಾಶಕ್ಕೆ ಕಾರಣವಾಗಲಿದೆ.
ಸೋಮವಾರಪೇಟೆ-ಮಡಿಕೇರಿ ಮುಖ್ಯ ರಸ್ತೆಯ ಐಗೂರು ವ್ಯಾಪ್ತಿಯ ಕಾಜೂರು ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಎದುರು ನೋಡುತ್ತಿರುವಂತೆ ಕಂಡುಬರುತ್ತಿದೆ. ರಸ್ತೆಯ ಬದಿಯಲ್ಲೆ ಒಣಗಿದ ಎಲೆಗಳಿದ್ದು, ಯಾವಾಗ ಅಗ್ನಿ ಅನಾಹುತ ಸಂಭವಿಸುವದೋ ಎಂಬ ಆತಂಕವನ್ನು ಹಲವರು ಪತ್ರಿಕೆಯೊಂದಿಗೆ ಹೊರಹಾಕಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಅಗ್ನಿದಾರಿಯನ್ನು ನಿರ್ಮಿಸುವ ಕೆಲಸ ನಿರ್ವಹಿಸಬೇಕಿದೆ. ‘ಕೋಟೆ ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಹಾಕಿದರಂತೆ’ ಎಂಬ ಗಾದೆ ಮಾತನ್ನು ಸುಳ್ಳಾಗಿಸಿ ತಕ್ಷಣಕ್ಕೆ ರಸ್ತೆ ಬದಿಯಲ್ಲಿ ‘ಅಗ್ನಿದಾರಿ’ ನಿರ್ಮಿಸಿ ಮುಂದಾಗ ಬಹುದಾದ ಅನಾಹುತದಿಂದ ಅರಣ್ಯ ಜೀವಿಗಳು, ಸಸ್ಯ ಸಂಕುಲವನ್ನು ರಕ್ಷಿಸಬೇಕಿದೆ.
- ವಿಜಯ್