ಮಡಿಕೇರಿ, ನ. 4: ಅದೆಷ್ಟೋ ವಿದ್ಯಾದಾನ ಮಾಡಿ ಇತ್ತೀಚಿನ ಕೆಲ ವರ್ಷಗಳಿಂದ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಜಿ.ಟಿ. ರಸ್ತೆಯ ನಗರಸಭೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡಗು ಜಿಲ್ಲಾ ಜಯಕರ್ನಾಟಕ ಸಂಘಟನೆ ವತಿಯಿಂದ ಇಂದು ಶ್ರಮದಾನ ಕಾರ್ಯಕ್ರಮ ನಡೆಯಿತು.ಶಾಲೆಯ ಸುತ್ತಲೂ ತುಂಬಿ ಹೋಗಿದ್ದ ಕಾಡನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಬೆಳೆದು ನಿಂತಿದ್ದ ಕಾಡನ್ನು ಕಡಿದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ರಾಬಿನ್ ಕುಟ್ಟಪ್ಪ, ನಗರಸಭಾ ಹಿರಿಯ ಪ್ರಾಥಮಿಕ ಶಾಲೆಯು ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು, ಇಲ್ಲಿನ ತಾತ್ಕಾಲಿಕ ಶಿಕ್ಷಕರಿಗೆ ಸೂಕ್ತ ವೇತನವಿಲ್ಲ. ಮಕ್ಕಳಿಗೆ ಅಗತ್ಯ ಸೌಲಭ್ಯಗಳಿಲ್ಲ. ಮಕ್ಕಳ ಸಂಖ್ಯೆಯೂ ತೀರಾ ಕಡಿಮೆಯಿದೆ. ಅನೇಕ ಗಣ್ಯರನ್ನು ಸಮಾಜಕ್ಕೆ ನೀಡಿದ ಈ ಶಾಲೆಯನ್ನು ಅಭಿವೃದ್ಧಿ ಪಡಿಸಲು ಯಾರೊಬ್ಬರು ತಲೆಕೆಡಿಸಿಕೊಂಡಂತಿಲ್ಲ. ಆದ್ದರಿಂದ ಒಂದು ವಾರದೊಳಗೆ ಸಂಬಂಧಿಸಿದವರು ಈ ಶಾಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಗರಸಭೆ ಎದುರು ಜಯಕರ್ನಾಟಕ ಸಂಘಟನೆ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಮುರಳೀಧರ್, ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ, ಯುವ ಘಟಕದ ಅಧ್ಯಕ್ಷ ಕಿರಣ್ ಬೋಪಯ್ಯ, ಆರೋಗ್ಯ ಘಟಕ ಅಧ್ಯಕ್ಷ ಹಿದಾಯತುಲ್ಲಾ, ಮಡಿಕೇರಿ ನಗರಾಧ್ಯಕ್ಷ ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮುಕ್ಕಾಟಿರ ದಿನು ಸೋಮಣ್ಣ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.