ಸೋಮವಾರಪೇಟೆ, ಅ. 17: ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪದ ಕಾಡಂಚಿನ ಗ್ರಾಮ ಬಳ್ಳೂರು ಹುಂಡಿ ಬಳಿ ಕಾಡುಹಂದಿಯನ್ನು ಬೇಟೆಯಾಡಿದ ಜಿಲ್ಲೆಯ ಈರ್ವರನ್ನು ಅಲ್ಲಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೋವಿಯನ್ನು ವಶಕ್ಕೆ ಪಡೆದಿದ್ದರೆ, ಉಳಿದ ಆರು ಆರೋಪಿಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾಮದ ಸುಂದರ್ ಹಾಗೂ ಮೋಹನ್ ಅವರುಗಳೇ ಬಂಧಿತರಾಗಿದ್ದು, ಉಳಿದಂತೆ ಜಯರಾಂ, ಮುತ್ತಣ್ಣ, ಪ್ರತಾಪ್, ರಮೇಶ್, ರಾಮಚಂದ್ರ, ಗಣಪತಿ ಅವರುಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.ನಿನ್ನೆ ದಿನ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದ ಹೊರವಲಯದ ಕಾಡಂಚಿನ ಪ್ರದೇಶವಾದ ತೊಟ್ಟಲು ಬಾವಿಹಳ್ಳ ಅರಣ್ಯ ಭಾಗದಲ್ಲಿ ಕಾಡುಹಂದಿಯನ್ನು ಬೇಟೆಯಾಡುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಧಾಳಿ ನಡೆಸಿದ ಅಲ್ಲಿನ ಅರಣ್ಯ ಇಲಾಖಾ ಆರ್‍ಎಫ್‍ಓ ಸಂದೀಪ್ ನೇತೃತ್ವದ ಸಿಬ್ಬಂದಿಗಳ ತಂಡ, ಈರ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಸ್ಥಳದಲ್ಲಿ ಬೇಟೆಯಾಡಿದ ಕೋವಿ, ಕಾಡುಹಂದಿ ಸಹಿತ ಈರ್ವರು ಬೇಟೆಗಾರರನ್ನುವಶಕ್ಕೆ ಪಡೆಯಲಾಗಿದ್ದು, ಉಳಿದ 6 ಮಂದಿ ಪರಾರಿಯಾಗಿದ್ದಾರೆ. ಬಂದಿತ ಈರ್ವರನ್ನು ನಿನ್ನೆ ಸಂಜೆ ನಂಜನಗೂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದ್ದು, ಬಂಧಿತರಿಂದ ಒಂದು ಬಂದೂಕು, 12 ಸುತ್ತು ಗುಂಡು, 2 ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಡಿಯಾಲ ಅರಣ್ಯ ವೃತ್ತದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.