ಸುಂಟಿಕೊಪ್ಪ, ಸೆ. 23: ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ತುಂತುರು ಮಳೆಯ ನಡುವೆ ಬೆಳೆಗಳು ಹಾಳಾಗುತ್ತಿದ್ದು ಈ ಮಧ್ಯೆ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಗ್ರಾಮಸ್ಥರು ಆತಂಕದ ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ.

ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀಧರನ್ ಎಂಬವರಿಗೆ ಸೇರಿದ ಮ್ಯಾಗಡೂರ್ ತೋಟದಲ್ಲಿ ಕಾಡಾನೆಯೊಂದು ಬೀಡುಬಿಟ್ಟಿದೆ. ಶುಕ್ರವಾರ ಹಾಡಹಗಲಿನಲ್ಲೇ ಇಲ್ಲಿನ ತೋಟದ ಕಾಫಿ ಒಣಗಿಸುವ ಕಣದಲ್ಲಿ ಪ್ರತ್ಯಕ್ಷವಾಗಿದ್ದು, ಕಾರ್ಮಿಕರು ಆನೆಯನ್ನು ಕಂಡು ಹೆದರಿ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ. ಕಾರ್ಮಿಕರ ಕಿರುಚಾಟಕ್ಕೆ ಹೆದರಿ ಓಡಿದ ಆನೆ ಮ್ಯಾಗಡೂರು ಕುಟುಂಬಸ್ಥರಿಗೆ ಸೇರಿದ ವಿಶ್ವನಾಥ ದೇವಾಲಯದ ತಡೆಗೋಡೆಯನ್ನು ಕೆಡವಿ ನಂತರ ಅಲ್ಲೇ ಇದ್ದ ತೆಂಗಿನ ಮರ, ಕಾಫಿ ಗಿಡಗಳಿಗೆ ಹಾನಿಗೊಳಿಸಿ ತೋಟದತ್ತ ತೆರಳಿದೆ. ಇದರಿಂದ ತೋಟದ ಮಾಲೀಕರು ಮತ್ತು ಕಾರ್ಮಿಕರು ಆತಂಕಕ್ಕೀಡಾಗಿದ್ದಾರೆ.

ಇದೇ ರೀತಿ ಜನವಲಯವಿರುವ ಸ್ಥಳದಲ್ಲಿ ಆನೆಗಳು ಪ್ರತ್ಯಕ್ಷವಾಗುತ್ತಿರುವದರಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೇ ಮನೆಗಳಲ್ಲಿ ಇರಿಸುವಂತಹ ಪರಿಸ್ಥಿತಿ ಎದುರಾಗಿದೆ.

ಈ ಬಗೆ ಪ್ರತಿಕ್ರಿಯೆ ನೀಡಿದ ಗ್ರಾಮಸ್ಥರು, ನಿರಂತರವಾಗಿ ಕಾಡಾನೆಗಳು ರಾತ್ರಿ ಹಗಲೆನ್ನದೇ ಓಡಾಡುತ್ತಿದ್ದು ತುರ್ತು ಸಂದರ್ಭದಲ್ಲಿ ಪಟ್ಟಣಗಳಿಗೆ ಬರುವದಕ್ಕೂ ಭಯಪಡುವಂತಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ತೋಟದ ಮಾಲೀಕ ಶ್ರೀಧರನ್ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ನಷ್ಟ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವದರೊಂದಿಗೆ ರೈತಾಪಿ ವರ್ಗದವರ ಹೊಲ, ಗದ್ದೆ, ತೋಟಗಳನ್ನು ಉಳಿಸುವಲ್ಲಿ ಪ್ರಯತ್ನಿಸಲಿ ಎಂಬದೇ ಸಾರ್ವಜನಿಕರ ಆಗ್ರಹವಾಗಿದೆ.