ಸಿದ್ದಾಪುರ, ಜ. 2: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿಯಲು ಕೇಂದ್ರ ಸರಕಾರ ಅನುಮತಿ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ.ಪ್ರದೀಪ್ ಒತ್ತಾಯಿಸಿದ್ದಾರೆ.

ಮಾಲ್ದಾರೆ ಸಮೀಪದ ಮೈಲಾದ್ ಪುರದ ನಿವಾಸಿ ಕಾರ್ಮಿಕ ಚೆಲುವ ಅವರು ಇತ್ತೀಚೆಗೆ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದರು. ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಕಾಡಾನೆ ಹಾವಳಿ ಹೆಚ್ಚಾಗಿದ್ದು ಕೊಡಗು ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ಸುಮಾರು 80ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮಾನವ ಆನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಪುಂಡಾನೆಗಳನ್ನು ಸೆರೆಹಿಡಿಯಲು ಕೇಂದ್ರ ಸರ್ಕಾರವು ಅನುಮತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಅರಣ್ಯ ಪ್ರದೇಶದಲ್ಲಿ ಕಾಡಾನೆಗಳಿಗೆ ಬಿದಿರು ಸೇರಿದಂತೆ ನೀರಿನ ಸೌಕರ್ಯ ಇಲ್ಲದಿರುವದರಿಂದ ಜಿಲ್ಲಾದ್ಯಂತ ಕಾಡಾನೆಗಳು ಆಹಾರವನ್ನು ಅರಸಿ ತೋಟಗಳಲ್ಲಿ ಬೀಡುಬಿಟ್ಟಿದ್ದು ನೂರಕ್ಕೂ ಅಧಿಕ ಕಾಡಾನೆಗಳು ಇರುವದು ಆತಂಕಕಾರಿಯಾಗಿದೆ. ಈ ಬಗ್ಗೆ ತಾನು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ಗಮನಕ್ಕೆ ತರವದಾಗಿ ತಿಳಿಸಿದರು. ಕಾಡಾನೆಗಳ ಧಾಳಿಯಿಂದ ಅನೇಕ ಅಮೂಲ್ಯ ಜೀವಗಳು ಬಲಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಕೇಂದ್ರ ಸರ್ಕಾರ ಇನ್ನಷ್ಟು ಆನೆಗಳನ್ನು ಹಿಡಿಯಲು ಅನುಮತಿ ನೀಡಬೇಕು ಹಾಗೂ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವದಾಗಿ ತಿಳಿಸಿದರು. ಇದಕ್ಕೆ ರಾಜಕೀಯ ರಹಿತವಾಗಿ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಆನೆ ಧಾಳಿಯಿಂದ ಜೀವ ಕಳೆದುಕೊಂಡವರಿಗೆ ಸರ್ಕಾರ ರೂ 5 ಲಕ್ಷ ಪರಿಹಾರ ನೀಡುವದು ಮುಖ್ಯವಲ್ಲ. ಕಾಡಾನೆಗಳ ಹಾವಳಿ ಯಿಂದ ಜಿಲ್ಲೆಯ ಜನ ಬೇಸತ್ತಿದ್ದು, ಇದಕ್ಕೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ತಾ.ಪಂ ಸದಸ್ಯೆ ಚಿನ್ನಮ್ಮ, ಗ್ರಾ ಪಂ. ಸದಸ್ಯ ಸಜೀ ತೋಮಸ್, ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಎ.ಕೆ ಹಕೀಂ, ಕಾಂಗ್ರೆಸ್ ಪದಾಧಿಕಾರಿಗಳಾದ ಬಿ. ಎಸ್. ಬಿದ್ದಪ್ಪ, ನಿಸಾರ್ ಅಹಮ್ಮದ್ ಮುಂತಾದವರು ಹಾಜರಿದ್ದರು.