ಶ್ರೀಮಂಗಲ, ಆ1 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಗ್ರ್ರಾಮದಲ್ಲಿ ಬೀಡು ಬಿಟ್ಟಿದ್ದು ಸಮೀಪದ ಅರಣ್ಯಕ್ಕೆ ಕಾರ್ಯಾಚರಣೆ ಮಾಡಿ ಅಟ್ಟುವದರಿಂದ ಮತ್ತೆ ಅರಣ್ಯದತ್ತ ಹಿಂತಿರುಗುತ್ತಿದೆ. ಆದ್ದರಿಂದ ಈ ಕಾಡಾನೆಯನ್ನು ಅರವಳಿಕೆ ಮೂಲಕ ಸೆರೆಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಬೇಕೆಂದು ಬಿರುನಾಣಿ ಗ್ರ್ರಾಮ ಪಂಚಾಯಿತಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು ಈ ವ್ಯಾಪ್ತಿಯಲ್ಲಿ ಕಾಡಾನೆಯಿಂದ ಜೇನು ಕುರುಬರ ರಾಜು, ಕುಪ್ಪಣಮಾಡ ಪೂಣಚ್ಚ, ಬೊಜ್ಜಂಗಡ ನಂಜಪ್ಪ, ಆಂಟೋನಿ ಹಾಗೂ ಕಾಡು ಕುರುಬರ ಮಣಿ ಸಾವಿಗೀಡಾಗಿದ್ದಾರೆ. ಈ ಕಾಡಾನೆ ಇದೀಗ ಬಿರುನಾಣಿ ಸಮೀಪ ನೇಪಳ್ಳಿಯಲ್ಲಿ ಬೀಡುಬಿಟ್ಟಿದೆ. ಅರಣ್ಯದಲ್ಲಿ ಸರಿಯಾದ ಆಹಾರ ವಿಲ್ಲದ ಕಾರಣ ಗ್ರಾಮದೊಳಕ್ಕೆ ನುಸುಳುತ್ತಿದೆ. ಕೇರಳದ ಗಡಿ ಪ್ರದೇಶವಾಗಿರುವ ಈ ವ್ಯಾಪ್ತಿಯಲ್ಲಿ ಕೇರಳದ ಸಾಕಾನೆಗಳನ್ನೂ ಸಹ ಇಲ್ಲಿ ಬಿಡಲಾಗಿದೆ. ಇದರಿಂದ ಈ ಭಾಗದಲ್ಲಿ ರೈತರ ಬೆಳೆ ನಾಶವಾಗುತ್ತಿದೆ.ಅರಣ್ಯ ಇಲಾಖೆ ಈ ಭಾಗದ ಅರಣ್ಯದಲ್ಲಿ ಕಾಡಾನೆಗಳ ಆಹಾರವಾದ ಬಿದಿರು, ವಾಟೆ, ಹಲಸಿನ ಮರ, ಹೆಬ್ಬಲಸು, ಬದನಿ, ಬೂದಿ ಉಪ್ಪಟೆ, ಚಿಕ್ಕಉಪ್ಪಟೆ, ಕಬ್ಬ ಮರ, ಹತ್ತಿ ಮರ, ಬ್ಯಾಂಗೆ ಮರಗಳನ್ನು ಹಾಗೂ ಹಸಿ ಹುಲ್ಲುಗಳನ್ನು ನೆಡಲು ಗಂಭೀüರ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಲಕ್ಷ್ಮಣ ತೀರ್ಥ ನದಿ ಪಾತ್ರ ಪ್ರದೇಶವಾದ ದಕ್ಷಿಣ ಕೊಡಗಿನ ಬ್ರಹ್ಮಗಿರಿ ಅರಣ್ಯ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕೃತಕ ಮೋಡ ಬಿತ್ತನೆ ಮೂಲಕ ಮಳೆ ಸುರಿಸಲು ಚಿಂತಿಸಿರುವ ಸರ್ಕಾರದ ಕ್ರಮ ಸರಿಯಲ್ಲ ಇದರಿಂದ ಅಸ್ವಾಭಾವಿಕವಾಗಿ ಸುರಿಯುವ ಮಳೆ ತೋಟಗಾರಿಕಾ ಬೆಳೆಗಳು ಹಾಗೂ ಭತ್ತದ ಬೆಳೆಗಳಿಗೂ ಮಾರಕ ಪರಿಣಾಮ ಬೀರಿ ರೋಗ ತರುತ್ತದೆ. ಆದ್ದರಿಂದ ಸರಕಾರ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಸುರಿಸುವ ಚಿಂತನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.