ವೀರಾಜಪೇಟೆ, ಸೆ.20 : ಕೊಡಗಿನಲ್ಲಿ ಕಾಡಾನೆ ಧಾಳಿಗೆ ನಿರಂತರವಾಗಿ ಅಮಾಂiÀiಕರು ಬಲಿಯಾಗುತ್ತಿದ್ದಾರೆ.ಇದಕ್ಕೆ ಸರಕಾರ ಅಮಾಯಕರಿಗೆ ರಕ್ಷಣೆ ನೀಡುತ್ತಿಲ್ಲ. ಅರಣ್ಯ ಸಚಿವರು ನಿಷ್ಕ್ರಿಯರಾಗಿ ವರ್ತಿಸುತ್ತಿರುವದನ್ನು ವಿರೋಧಿಸಿ ಜನತಾ ದಳದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ವಿಭಾಗೀಯ ಅರಣ್ಯ ಕಚೇರಿ ಮುಂದೆ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು.
ತೆಲುಗರಬೀದಿಯ ಮಾರಿಯಮ್ಮ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ನಾಗರಹೊಳೆ ನಾಣಚ್ಚಿ ಹಾಡಿಯ ತಮಟೆಯೊಂದಿಗಿನ ಕಲಾತಂಡಗಳು, ಡೊಳ್ಳು ವಾದ್ಯ, ಅಧಿಕ ಸಂಖ್ಯೆಯ ಮಹಿಳೆಯರು, ಪುರುಷರು ಸೇರಿದಂತೆ ಮೆರವಣಿಗೆ ಮುಖ್ಯ ರಸ್ತೆ, ಗೌರಿ ಕೆರೆ ಮಾರ್ಗವಾಗಿ ಗಾಂಧಿನಗರದ ಅರಣ್ಯ ವಿಭಾಗ ಕಚೇರಿಯನ್ನು ತಲುಪಿ ನಂತರ ಕಚೇರಿಯ ಗೇಟ್ ಮುಂದೆ ಧರಣಿ ಮುಷ್ಕರ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಅರಣ್ಯ ಇಲಾಖೆ ಕೂಲಿ ಕಾರ್ಮಿಕರು, ಕಡು ಬಡವರು, ಅರಣ್ಯದ ಅಂಚಿನಲ್ಲಿ ವಾಸಿಸುವ ಗಿರಿಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಕಾಡಾನೆ ಧಾಳಿಯಿಂದ ನಿರಂತರವಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇವರಿಗೆ ರಕ್ಷಣೆ ಇಲ್ಲ. ಸಾವನ್ನಪ್ಪಿದರೆ ತಕ್ಷಣ ಪರಿಹಾರ ನೀಡಲು ಚೆಕ್ ಪುಸ್ತಕವನ್ನು ಜೇಬಿನಲ್ಲಿಯೇ ಇಟ್ಟುಕೊಂಡು ಸಂಚರಿಸುವ ಅಧಿಕಾರಿಗಳು ಧಾಳಿಯ ಮುನ್ನೆಚ್ಚರಿಕೆಯ ಕ್ರಮವನ್ನೇಕೆ ಅನುಸರಿಸುತ್ತಿಲ್ಲ ಹುಲಿ ಧಾಳಿಗೆ ಬಲಿಯಾದ ಹಸುವಿನ ಮಾಲೀಕರಿಗೆ ಪರಿಹಾರ, ಕಾಡಾನೆ ಧಾಳಿಯ ಗಾಯಾಳುವಿಗೂ ಸೂಕ್ತ ಪರಿಹಾರ ಒದಗಿಸಬೇಕು, ಚನ್ನನಕೋಟೆ ಗೂಡ್ಲೂರು ಚನ್ನಂಗಿ ಮೂಡಾಬೈಲ್ನ ಪುನರ್ವಸತಿಯ 166 ಕುಟುಂಬಗಳಿಗೆ ತಲಾ 5 ಎಕರೆ ಜಾಗ ಹಾಗೂ ಅದರ ಅಭಿವೃದ್ಧಿಗೆ ಸಹಾಯ ಧನ ಒದಗಿಸುವಂತೆ ಆಗ್ರಹಿಸಿದರಲ್ಲದೆ 15 ದಿನಗಳೊಳಗೆ ಈ ಬೇಡಿಕೆಗಳು ಈಡೇರದಿದ್ದರೆ ಎಲ್ಲ ಸಂಘ ಸಂಸ್ಥೆಗಳು ಪಕ್ಷದ ಕಾರ್ಯಕರ್ತರೊಂದಿಗೆ ಬೆಂಗಳೂರಿನ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಕಚೇರಿಯನ್ನು ಮುತ್ತಿಗೆ ಹಾಕದಂತೆ ನಗರ ಪೊಲೀಸರಿಂದ ಅರಣ್ಯ ಕಚೇರಿಯ ಗೇಟ್ ಬಳಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಮಡಿಕೇರಿಯ ಅರಣ್ಯ ಇಲಾಖೆಯ ಸಭೆಯೊಂದರಲ್ಲಿ ಭಾಗಿಯಾಗಿದ್ದ ಡಿ.ಎಫ್.ಓ ಶಂಕರ್ಗೆ ನಗರ ಪೊಲೀಸರು ನೀಡಿದ ಸಂದೇಶದ ಮೇರೆ ಅಪರಾಹ್ನ 1 ಗಂಟೆಗೆ ವೀರಾಜಪೇಟೆ ಕಚೇರಿಗೆ ಧಾವಿಸಿ ಪ್ರತಿಭಟನಾಕಾರರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಸಂಕೇತ್ ಪೂವಯ್ಯ ಅವರು ಮೂರು ಮನವಿಗಳನ್ನು ಸಲ್ಲಿಸಿದರು.
ಕೊಡಗಿನಲ್ಲಿ ನಿರಂತರ ಕಾಡಾನೆ ದಾಳಿಗೆ ಅಮಾಯಕರು ಬಲಿಯಾ ಗುತ್ತಿರುವದು, ಈಚೆಗೆ ಪಾಲಂಗಾಲ ದಲ್ಲಿ ಕಾಡಾನೆ ಧಾಳಿಯಿಂದ ಕರಿನೆರವಂಡ ಉದಯ ಎಂಬವರು ಶಾಶ್ವತ ಅಂಗವಿಕಲರಾಗಿದ್ದು ಈ ತನಕ ಪರಿಹಾರ ದೊರೆಯದಿರುವದು. ಚನ್ನನಕೋಟೆ ಗೂಡ್ಲೂರು, ಚನ್ನಂಗಿ, ಮೂಡಾಬೈಲ್ ಪುನರ್ವಸತಿಯರಿಗೆ ತಿತಿಮತಿಯ ಮಜ್ಜಿಗೆ ಹಳ್ಳದಿಂದ ಸ್ಥಳಾಂತರದ ಸಮಯದಲ್ಲಿ ಅಧಿಕಾರಿಗಳು ಹೇಳಿದ 5ಎಕರೆ ಜಾಗಕ್ಕೆ ಬದಲಾಗಿ 1ರಿಂದ2 ಎಕರೆ ಜಾಗ ನೀಡಿ ವಂಚಿಸಿರುವ ಕುರಿತು ಸಂಕೇತ್ ಅವರು ಡಿ.ಎಫ್.ಓ ಗಮನಕ್ಕೆ ತಂದರು.
ಪ್ರತಿಭಟನಾಕಾರರ ಪ್ರಮುಖ ರೊಂದಿಗೆ ಮಾತನಾಡಿದ ಡಿ.ಎಫ್.ಓ ಶಂಕರ್ ಅವರು ವಿಭಾಗೀಯ ಅರಣ್ಯ ಅಧಿಕಾರಿಯ ವ್ಯಾಪ್ತಿಯಲ್ಲಿ ಬರುವ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ತಕ್ಷಣ ಈಡೇರಿಸಲಾಗುವದು. ಸರಕಾರದ ಮಟ್ಟದ ಉನ್ನತಾಧಿ ಕಾರಿಗಳ ವ್ಯಾಪ್ತಿಗೆ ಬರುವ ಬೇಡಿಕೆಗಳನ್ನು ಈಡೇರಿಸಲು ಬೆಂಗಳೂರಿಗೆ ಕಳುಹಿಸಲಾಗುವದು ಎಂದರು. ಮೆರವಣಿಗೆಯಲ್ಲಿ ಸಾಗಿ ಬಂದ ತಮಟೆ ವಾದ್ಯದೊಂದಿಗೆ ನಾಗರಹೊಳೆ ಕುರುಬರ ಸಾಂಪ್ರ ದಾಯಿಕ ಕಲಾತಂಡಗಳ ಕುಣಿತ, ಕಾಡಾನೆ ಧಾಳಿಯಿಂದ ಸಾವು ಕಾಡಾನೆ ತುಳಿತದಿಂದ ಸರಕಾರ ನಿಷ್ಕ್ರೀಯತೆ ಯನ್ನು ಅಣಕಿಸುವ ಕುಣಿತ, ಡೊಳ್ಳು ವಾದ್ಯ ಪ್ರತಿಭಟನಾ ಮೆರವಣಿಗೆಗೆ ವಿಶೇಷ ಮೆರುಗನ್ನು ನೀಡಿತ್ತು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ವಿ.ಎ.ಸುಬ್ರಮಣಿ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ, ಜಿಲ್ಲಾ ವಕ್ತಾರ ಭರತ್, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್.ಮತೀನ್, ಸಿ.ಎಲ್.ವಿಶ್ವ, ಪಕ್ಷದ ಜಿಲ್ಲಾ ಮುಖಂಡರುಗಳಾದ ಸಿ.ಎ.ನಾಸಿರ್, ಮನ್ಸೂರ್ ಆಲಿ, ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಯೋಗೀಶ್, ಅಶ್ರಫ್ ಆಲಿ, ಆದಿಲ್ ಪಾಷ ಜಿಲ್ಲಾ ಮಹಿಳಾ ಘಟಕದ ಶಶಿ ಸುವರ್ಣ, ನಗರ ಸಮಿತಿ ಅಧ್ಯಕ್ಷ ಆರ್.ಎ.ಸಕ್ಲೇನ್, ಗೂಡ್ಲೂರು ಮೂಡಬೈಲು ಚನ್ನಂಗಿಯ 166 ಕುಟುಂಬಗಳ ಸದಸ್ಯರುಗಳು ಪಾಲಂಗಾಲದಲ್ಲಿ ಅಂಗ ವೈಫಲ್ಯಯತೆಗೊಳಗಾದ ಕರಿನೆರವಂಡ ಮುತ್ತಪ್ಪ ಹಾಗೂ ಕುಟುಂಬಸ್ಥರು ಗೂಡ್ಲೂರಿನ ಬಿ.ಎಲ್.ನಾಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.