ಸಿದ್ದಾಪುರ, ಸೆ: 18: ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯ ಗೊಂಡಿರುವ ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದ ಬಳಿ ನಡೆದಿದೆ.

ಮೂಲತಃ ಪಿರಿಯಾಪಟ್ಟಣ ತಾಲೂಕು ನಿವಾಸಿ ನೀಲೆಗೌರ ಎಂಬವರ ಪುತ್ರ ಬಸವರಾಜು (32) ಎಂಬವರು ಎಂದಿನಂತೆ ಮನೆ ಮನೆಗೆ ತೆರಳಿ ಹೂ ಮಾರಾಟ ಮಾಡುತ್ತಿದ್ದು, ಬೆಳಗ್ಗೆ ಕೈರಾಸ್ ತೋಟದ ಬಳಿ ಮನೆಗಳಿಗೆ ಹೂ ಮಾರಾಟ ಮಾಡಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಂದರ್ಭ ತೋಟದ ಒಳಭಾಗದಿಂದ ದಿಢೀರನೆ ಒಂಟಿ ಸಲಗವೊಂದು ಧಾಳಿ ಮಾಡಿ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಪರಿಣಾಮ ಎಡಗೈ ಮೂಳೆ ಮುರಿದಿದ್ದು, ಮುಖ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಬಿ.ಜಿ. ಕುಮಾರ್, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತುರ್ತು ಚಿಕಿತ್ಸೆಗೆ ಪರಿಹಾರ ಹಣ ನೀಡಿದರು.

ಕಳೆದ ಒಂದು ತಿಂಗಳಿನಿಂದ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದು, ಕಾಡಾನೆಗಳು ತೋಟದಲ್ಲಿ ಬೀಡು ಬಿಟ್ಟಿದ್ದರೂ ಕೂಡ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕಾರ್ಮಿಕರು ಹಾಗೂ ತೋಟದ ಮಾಲೀಕರು ಭಯಭೀತರಾಗಿದ್ದು, ಕೂಡಲೆ ಕಾಡಾನೆಯನ್ನು ಕಾಡಿಗಟ್ಟಬೇಕೆಂದು ಒತ್ತಾಯಿಸಿದ್ದಾರೆ.

-ವಾಸು ಆಚಾರ್ಯ