*ಗೋಣಿಕೊಪ್ಪಲು, ಅ. 4: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಕಾಡಾನೆ ಹಿಂಡು ಧಾಳಿ ನಡಸಿ ಕಾರ್ಮಿಕ ಮಹಿಳೆ ಯೊಬ್ಬರು ಗಾಯಗೊಂಡಿರುವ ಘಟನೆ ತಿತಿಮತಿ ತಾರಿಕಟ್ಟೆಯಲ್ಲಿ ನಿನ್ನೆ ಜರುಗಿದೆ. ಅಸ್ಸಾಂ ಮೂಲದ ಫಾತಿಮ ಗಾಯಗೊಂಡ ಮಹಿಳೆಯಾಗಿದ್ದಾರೆ.

ಕಾಫಿ ತೋಟದಲ್ಲಿ ಎಂದಿನಂತೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಒಂದು ಮರಿಯಾನೆ ಸೇರಿದಂತೆ 8 ಆನೆಗಳ ಹಿಂಡು ಒಮ್ಮೆಲೇ ಕಾರ್ಮಿಕರತ್ತ ನುಗ್ಗಿವೆ. ಇದರಿಂದ ಭಯಭೀತರಾದ ಕಾರ್ಮಿಕರು ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಹಲವರು ಬಿದ್ದು ಗಾಯಗೊಂಡಿದ್ದಾರೆ. ಫಾತಿಮ ಎಂಬ ಮಹಿಳೆಯ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ತಿತಿಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು.

ತಿತಿಮತಿ, ಪಾಲಿಬೆಟ್ಟ, ದೇವರಪುರ ಭಾಗದಲ್ಲಿ ಕಾಡಾನೆ ಧಾಳಿ ಅತಿಯಾಗಿದ್ದು, ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಇಂದು ಯಾವದೇ ಕಾರ್ಮಿಕರು ತೋಟದತ್ತ ಸುಳಿಯಲಿಲ್ಲ. ಇದರಿಂದ ಕಾರ್ಮಿಕರ ಕೂಲಿಗೆ ತೊಂದರೆಯಾಗುತ್ತಿದೆ. ಇತ್ತ ಕಾಫಿ ತೋಟದ ಮಾಲೀಕರಿಗೂ ನಷ್ಟವಾಗುತ್ತಿದೆ.

ಕಾಫಿ ತೋಟದಲ್ಲಿ ಕಾಡಾನೆ ಹಿಂಡು ತಂಗಿವೆ. ಕಾಡಾನೆಗಳನ್ನು ಕಾಡಿನತ್ತ ಓಡಿಸಿ ಎಂದು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ವಾಗಿಲ್ಲ. ಯಾವದೇ ಅರಣ್ಯಾಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ಕಾಫಿ ತೋಟದ ಮಾಲೀಕರಾದ ಕೂತಂಡ ವಾಣಿ ಪೊನ್ನಪ್ಪ ದೂರಿದರು.

ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ಅಕ್ಕಪಕ್ಕದ ಕಾಫಿ ತೋಟದ ಮಾಲೀಕರು ಸ್ಪಂದಿಸಿದರೆ ಕಾಡಾನೆಗಳನ್ನು ಕಾಡಿಗೆ ಅಟ್ಟಬಹುದು. ಇದಕ್ಕೆ ಸಾರ್ವಜನಿಕರ ಮತ್ತು ಕಾಫಿ ಬೆಳೆಗಾರರ ಸಹಕಾರ ಬೇಕು ಎಂದು ಅರಣ್ಯ ಇಲಾಖೆ ನೌಕರರು ಹೇಳಿದರು.