ಸಿದ್ದಾಪುರ, ಡಿ. 29: ಹಾಡಹಗಲೇ ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಪಾಲಿಬೆಟ್ಟ ರಸ್ತೆಯ ವಡ್ಡರಕಾಡು ಕಾಫಿ ತೋಟದಲ್ಲಿ ನಡೆದಿದೆ.

ಬಾಡಗ-ಬಾಣಂಗಾಲ ಗ್ರಾಮದ ಮೈಲಾತ್‍ಪುರ ನಿವಾಸಿ ದಾಸ ಎಂಬವರ ಪುತ್ರ ಚೆಲುವ(42) ಎಂಬಾತ ದಿನಂಪ್ರತಿ ವಡ್ಡರಕಾಡು ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಇಂದು ಮಧ್ಯಾಹ್ನ ತೋಟದ ಮಾಲೀಕರ ಟ್ರ್ಯಾಕ್ಟರ್‍ನಲ್ಲಿ ಚಾಲಕ ಸೇರಿದಂತೆ ಆರು ಮಂದಿ ಕಾಲಿ ಚೀಲಗಳನ್ನು ತೆಗೆದುಕೊಂಡು ಕಾಫಿ ತುಂಬಿಸಲು ತೆರಳುತ್ತಿದ್ದ ಸಂದರ್ಭ ತೋಟದ ರಸ್ತೆಯ ತಿರುವೊಂದರಲ್ಲಿ ಒಂಟಿ ಸಲಗವೊಂದು ದಿಢೀರನೆ ಎದುರಾಗಿದೆ ಎನ್ನಲಾಗಿದೆ. ಈ ಸಂದರ್ಭ ಟ್ರ್ಯಾಕ್ಟರ್ ಚಾಲಕ ವೆಂಕಟೇಶ್ ಸೇರಿದಂತೆ ಐದು ಮಂದಿ ಕಾರ್ಮಿಕರು ತಮ್ಮ ಪ್ರಾಣ ರಕ್ಷಿಸಲು ದಿಕ್ಕಾಪಾಲಾಗಿ ಓಡಿದ್ದಾರೆ. ಟ್ರ್ಯಾಕ್ಟರ್‍ನ ಹಿಂಭಾಗದಲ್ಲಿದ್ದ ಚೆಲುವ ಟ್ರ್ಯಾಕ್ಟರ್‍ನಿಂದ ಇಳಿಯಲು ತಡವಾಗಿದ್ದ, ಸಂದರ್ಭ ಕಾಡಾನೆಯು ಸೊಂಡಿಲಿನಿಂದ ಎಳೆದುಹಾಕಿ ಚೆಲುವನ ತಲೆ ಹಾಗೂ ಕಾಲಿಗೆ ತುಳಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮಾಲೀಕರ ಹಾಗೂ ವ್ಯವಸ್ಥಾಪಕರ ವಿರುದ್ಧ ಆಕ್ರೋಶ : ಮಧ್ಯಾಹ್ನ 1 ಗಂಟೆಯ ಸಮಯಕ್ಕೆ ಕಾಡಾನೆ ಧಾಳಿಗೆ ಸಿಲುಕಿ ಚೆಲುವ ಮೃತಪಟ್ಟಿದ್ದರೂ ಕೂಡ ತೋಟದ ಮಾಲೀಕರಾಗಲಿ, ವ್ಯವಸ್ಥಾಪಕರಾಗಲಿ ಸ್ಥಳಕ್ಕೆ ಆಗಮಿಸಿಲ್ಲ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಮಾಲೀಕರು ಸ್ಥಳಕ್ಕೆ ಭೇಟಿ ನೀಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭ ಸ್ಥಳದಲ್ಲಿದ್ದ ತೋಟದ ಉಸ್ತುವಾರಿ ನೋಡುತ್ತಿದ್ದ ಮೇಸ್ತ್ರಿ ಮೊಯ್ದು ವಿರುದ್ಧ ಹರಿದಾಯ್ದ ಪ್ರಸಂಗವೂ ನಡೆಯಿತು. ಕೆಲ ಕಾಲ ಮಾತಿನ ಚಕಮಕಿ ನಡೆದು ಗೊಂದಲ ಏರ್ಪಟ್ಟಿತ್ತು. ಬಳಿಕ ಪೊಲೀಸರು ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸೆರೆಹಿಡಿಯಲು ಒತ್ತಾಯ : ಇಂದು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿರುವ ಘಟನೆಯನ್ನು ಖಂಡಿಸಿದ ಜಿ. ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಹಾಗೂ ತಾ.ಪಂ ಸದಸ್ಯ ಅಜಿತ್ ಕರುಂಬಯ್ಯ, ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಪುಂಡಾನೆಯನ್ನು ಕೂಡಲೇ ಸೆರೆಹಿಡಿಯಬೇಕು. ಮೃತ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ತೋಟದ ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮಾಲೀಕರು ಗನ್‍ಮ್ಯಾನ್‍ಗಳನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಆಕ್ರಂದನ : ಮೃತ ಚೆಲುವ ತಾಯಿ, ಪತ್ನಿ ಹಾಗೂ ಈರ್ವರು ಮಕ್ಕಳನ್ನು ಅಗಲಿದ್ದು, ಚೆಲುವನ ಸಾವಿನ ಸುದ್ಧಿ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ತುರ್ತು ಪರಿಹಾರ : ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಅಧಿಕಾರಿ ಗೋಪಾಲ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ತುರ್ತು ಪರಿಹಾರವಾಗಿ 2 ಲಕ್ಷದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಕಾಫಿ ತೋಟದ ಕಾಫಿ ಹಣ್ಣು ತಿಂದು ರುಚಿ ಕಂಡುಕೊಂಡಿರುವ ಕಾಡಾನೆಗಳು ತೋಟದಲ್ಲಿಯೇ ಬೀಡುಬಿಟ್ಟಿದ್ದು, ಕಾಫಿ ಕೊಯ್ಲುಗೆ ತೆರಳಲು ಕಾರ್ಮಿಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ತೋಟಗಳಲ್ಲಿ ಸೋಲಾರ್ ಬೇಲಿ ಅಳವಡಿಸಿದ್ದು, ಕಾಡಾನೆಗಳು ತೋಟದಿಂದ ಹೊರಬರದಂತಾಗಿದೆ.

-ವಾಸು