ಶ್ರೀಮಂಗಲ, ಜು. 13: ಕುಟ್ಟ , ಶ್ರೀಮಂಗಲ, ನಾಲ್ಕೇರಿ, ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ 1 ತಿಂಗಳಿನಿಂದ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳಿಂದ ಈ ಭಾಗದ ರೈತರ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದ್ದು, ಇನ್ನೊಂದೆಡೆ ತೋಟಗಳಲ್ಲಿ ಕೆಲಸಕ್ಕೆ ತೆರಳಲು ಹಾಗೂ ರಸ್ತೆ ಮೂಲಕ ಜನ ಸಂಚಾರಕ್ಕೂ ಉಂಟಾಗಿರುವ ಆತಂಕವನ್ನು ಪರಿಹರಿಸಲು ಬುಧವಾರದಿಂದ ಎರಡು ದಿನಗಳ ಕಾಲ ಕಾಡಾನೆ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಕುಟ್ಟ ಕೊಡವ ಸಮಾಜದಿಂದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ನಾಗರಿಕರ ಸಹಕಾರದಿಂದ ಸುಮಾರು 65 ಅಧಿಕಾರಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಸುಮಾರು 10 ಸಿಬ್ಬಂದಿಗಳಿಗೆ ಕೋವಿ, ಆನೆಗಳನ್ನು ಓಡಿಸುವ ಸಲುವಾಗಿ ತಮಟೆ ಸಹಿತ ಶಬ್ಧ ಮಾಡುವ ಪಟಾಕಿಯೊಂದಿಗೆ

4 ಗುಂಪುಗಳಾಗಿ ವಿಂಗಡಿಸಿ ಕಾಡಾನೆ ಬೀಡು ಬಿಟ್ಟಿರುವ ಸ್ಥಳ ಗುರುತಿಸಿ ಕಾರ್ಯಾಚರಣೆ ಆರಂಭಿಸಲಾಯಿತು.

ಕುಟ್ಟ ಗ್ರಾ.ಪಂ. ವ್ಯಾಪ್ತಿಯ ತೈಲ ಗ್ರಾಮದಲ್ಲಿ 6 ಮರಿಗಳೊಂದಿಗೆ,

13 ಹೆಣ್ಣಾನೆ ಮತ್ತು 3 ಗಂಡಾನೆ ಸೇರಿದಂತೆ

22 ಆನೆಗಳ ಗುಂಪು ಕಾರ್ಯಾಚರಣೆ ತಂಡಕ್ಕೆ ಗೋಚರಿಸಿದೆ. ತಮಟೆ, ಪಟಾಕಿಗಳ ಸದ್ದಿಗೆ ಗುಂಪು ಬೇರ್ಪಟ್ಟಿದ್ದು 2-3 ಗುಂಪುಗಳಾಗಿ ವಿಭಜನೆಗೊಂಡಿವೆ.

ಕಾಡಾನೆ ಹಿಂಡುಗಳನ್ನು ತೈಲ ಗ್ರಾಮದಿಂದ ನಾಗರಹೊಳೆ ಅಭಯಾರಣ್ಯಕ್ಕೆ ಸೇರಿಸಲು ಕಾರ್ಯಾಚರಣೆ ತಂಡ ಪ್ರಯತ್ನಿಸುತ್ತಿದೆ. ಆದರೆ ಕಾಡಾನೆ ಹಿಂಡುಗಳು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ತೆರಳುತ್ತಿದ್ದು, ಇನ್ನೊಂದು ಬದಿಯ ಬ್ರ್ರಹ್ಮಗಿರಿ ಅರಣ್ಯದತ್ತ ಮುಖ ಮಾಡಿ ಸ್ವಲ್ಪ ದೂರ ತೆರಳಿದರೂ ಮತ್ತೆ ಕಾಫಿ ತೋಟದೊಳಕ್ಕೆ ಸೇರಿಕೊಂಡಿವೆ. ಕಾರ್ಯಾಚರಣೆ ಸಂದರ್ಭ ಕಾಡಾನೆಗಳ ಗುಂಪು ಚದುರಿ ಹೋಗಿದ್ದು, ಮತ್ತೆ ಒಂದು ಸೇರಲು ಅತ್ತಿಂದಿತ್ತ ಕಾಫಿ ತೋಟದೊಳಗೆ ಸಂಚರಿಸುತ್ತಿದೆ.

ಕಾರ್ಯಾಚರಣೆಯ ಮೊದಲು ಕುಟ್ಟ ಕೊಡವ ಸಮಾಜದಲ್ಲಿ ಸಭೆ ಸೇರಿ ಕಾರ್ಯಾಚರಣೆಯ ರೂಪು ರೇಷೆಯನ್ನು ಜಿ.ಪಂ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ನೇತೃತ್ವದಲ್ಲಿ ರೂಪಿಸಲಾಯಿತು. ಕಾರ್ಯಾಚರಣೆಯಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಎ.ಸಿ.ಎಫ್ ಪಿ.ಎ. ಸೀಮಾ, ಶ್ರೀಮಂಗಲ ಆರ್.ಎಫ್.ಓ. ಪೌಲ್ ಆಂಟೋನಿ, ಪೊನ್ನಂಪೇಟೆ ಆರ್.ಎಫ್.ಓ. ಪಿ.ಪಿ. ಉತ್ತಪ್ಪ, ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಹೊಟ್ಟೆಂಗಡ ಪ್ರಕಾಶ್, ಸೇರಿದಂತೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಜಿಲ್ಲಾ ಮೀಸಲು ಪೋಸ್ ಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದಾರೆ.ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ.

ದಿನಗೂಲಿ ನೌಕರರಿಗೆ ದೊರಕದ ವೇತನ

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ವಿವಿಧ ವಿಭಾಗದ ಸುಮಾರು 65 ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ 22 ಸಿಬ್ಬಂದಿಗಳು ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು ಇವರಿಗೆ ಕಳೆದ 4 ತಿಂಗಳಿನಿಂದ ವೇತನ ಬಿಡುಗಡೆ ಅಗಿರುವದಿಲ್ಲ.

ಕೊಡಗು ವನ್ಯಜೀವಿ ಸಂಘದ ಕುಂಞಂಗಡ ಬೋಸ್ ಮಾದಪ್ಪ ಮಾತನಾಡಿ ಅರಣ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ವೇತನ ಕಾಲಕಾಲಕ್ಕೆ ಸಿಗುತ್ತಿಲ್ಲ. ಆಗಿಂದಾಗ್ಗೆ ಇದೇ ಸಮಸ್ಯೆ ಪುನರಾವರ್ತನೆ ಆಗುತ್ತಿದ್ದು, ತಮ್ಮ ವೇತನವನ್ನೇ ಅವಲಂಭಿಸಿ ಕುಟುಂಬ ನಿರ್ವಹಣೆ ಮಾಡಬೇಕಾಗಿರುವ ದಿನ ಗೂಲಿ ನೌಕರರ ವೇತನವನ್ನು ತಡಮಾಡದೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ನೀಡುವಂತೆ ಇಲಾಖೆಯ ಮೇಲಾಧಿಕಾರಿಗಳನ್ನು ಒತ್ತಾಯಿಸಿದರು.